ಪಚ್ಚನಾಡಿ: ಸರಣಿ ಅಪಘಾತದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆ
3 ವಾಹನಗಳಿಗೆ ಢಿಕ್ಕಿ, 14 ಮಂದಿ ಗಾಯಗೊಂಡಿದ್ದ ಘಟನೆ

ಮಂಗಳೂರು, ಡಿ.24: ಪಚ್ಚನಾಡಿ ಸೇತುವೆ ಸಮೀಪ ಶನಿವಾರ ಸಂಜೆ ಸಂಭವಿಸಿದ ಸರಣಿ ವಾಹನ ಅಪಘಾತದ ದೃಶ್ಯಾವಳಿ ಸ್ಥಳೀಯ ಸಿಸಿಟಿವಿ ಕ್ಯಾಮರಾವೊಂದರಲ್ಲಿ ಸೆರೆಯಾಗಿದೆ.
ಅತೀ ವೇಗದಿಂದ ಬಂದ ಬಸ್ ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಟಾಟಾ ಏಸ್, ಸ್ವಿಫ್ಟ್ ಕಾರು ಹಾಗೂ ಬೈಕೊಂದಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಟಾಟಾ ಏಸ್ ವಾಹನ ರಸ್ತೆಯಿಂದ ಗಿರಕಿ ಹೊಡೆದು ಬದಿಗೆ ಹೊರಳುತ್ತಿರುವ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ಈ ಅಪಘಾತದಲ್ಲಿ ಬಸ್ಸಿನಲ್ಲಿದ್ದ 12 ಪ್ರಯಾಣಿಕರ ಸಹಿತ ಒಟ್ಟು 14 ಮಂದಿ ಗಾಯಗೊಂಡಿದ್ದರು. ಕಾರು ಮತ್ತು ಏಸ್ ವಾಹನ ಸಂಪೂರ್ಣ ಜಖಂಗೊಂಡಿತ್ತು.
ಬಸ್ಸಿನ ಬ್ರೇಕ್ ವೈಫಲ್ಯ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದರೂ, ಚಾಲಕನ ಅಜಾಗರೂಕತೆಯ ಚಾಲನೆಯಿಂದಲೇ ಅಪಘಾತ ಸಂಭವಿಸಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಅಪಘಾತದ ಬಳಿಕ ಬಸ್ ಚಾಲಕ ಬಸ್ಸನ್ನು ಬಿಟ್ಟು ಪರಾರಿಯಾಗಿದ್ದನು.
Next Story