ನಾಸಿರುದ್ದೀನ್ ಶಾ ಬೆಂಬಲಕ್ಕೆ ನಿಂತ ಮಧುರ್ ಭಂಡಾರ್ಕರ್, ಆಶುತೋಷ್ ರಾಣಾ

ಹೊಸದಿಲ್ಲಿ, ಡಿ.24: ‘ಹಿಂಸೆಯಲ್ಲಿ ಪೊಲೀಸ್ ವ್ಯಕ್ತಿಯೊಬ್ಬರ ಸಾವಿಗಿಂತ ಹೆಚ್ಚಿನ ಮಹತ್ವವನ್ನು ಗೋಹತ್ಯೆಗೆ ನೀಡಲಾಗುತ್ತಿದೆ’ ಎಂದು ಹಿರಿಯ ನಟ ನಾಸಿರುದ್ದೀನ್ ಶಾ ನೀಡಿರುವ ಹೇಳಿಕೆಗೆ ಸಂಘ ಪರಿವಾರದ ಸಂಘಟನೆಗಳ ಆಕ್ರೋಶಕ್ಕೆ ಒಳಗಾಗಿರುವಂತೆಯೇ ಚಿತ್ರ ತಯಾರಕ ಮಧುರ್ ಭಂಡಾರ್ಕರ್ ಹಾಗೂ ನಟ ಆಶುತೋಷ್ ರಾಣಾ ಅವರು ಶಾ ಬೆಂಬಲಕ್ಕೆ ನಿಂತಿದ್ದಾರೆ.
ತಮ್ಮ ಮನದ ಮಾತುಗಳನ್ನು ಹೇಳಿದ್ದಕ್ಕಾಗಿ ಯಾರನ್ನೂ ಈ ರೀತಿ ತರಾಟೆಗೆ ತೆಗೆದುಕೊಳ್ಳುವ ಅಗತ್ಯವಿಲ್ಲವೆಂದು ರಾಣಾ ಹೇಳಿದರೆ, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ ಎಂದು ಭಂಡಾರ್ಕರ್ ಹೇಳಿದ್ದಾರೆ.
ನಾಸಿರುದ್ದೀನ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸುವ ಬದಲು ಅದರ ಬಗ್ಗೆ ಯೋಚಿಸಬೇಕು ಎಂದು ರಾಜಧಾನಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ ರಾಣಾ, ‘‘ಯಾರಾದರೂ ತಮ್ಮ ಮನಸ್ಸಿನ ಭಾವನೆಗಳನ್ನು ಹೇಳಿದರೆ ಹಾಗೂ ಅದರ ಬಗ್ಗೆ ಚರ್ಚೆ ನಡೆದರೆ ಅದು ದೇಶದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮ ಪಡಿಸುವುದೇ?’’ ಎಂದು ಪ್ರಶ್ನಿಸಿದರು.
ಇಂತಹುದೇ ಅಭಿಪ್ರಾಯ ವ್ಯಕ್ತಪಡಿಸಿದ ಭಂಡಾರ್ಕರ್, ‘‘ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವ ಹಕ್ಕಿದೆ’’ ಎಂದರು.
‘‘ಎಲ್ಲರಿಗೂ ಮಾತನಾಡುವ ಹಕ್ಕಿದೆ. ನಾವು ಪ್ರಜಾಪ್ರಭುತ್ವ ದೇಶದಲ್ಲಿದ್ದೇವೆ. ಇಲ್ಲಿ ಯಾವುದೇ ಭಯವಿದೆ ಎಂದು ನನಗನಿಸುವುದಿಲ್ಲ. ಭಾರತದಲ್ಲಿ ಎಲ್ಲರೂ ಸಮಾನರು’’ ಎಂದು ಭಂಡಾರ್ಕರ್ ಹೇಳಿದರು. ‘‘ದೇಶದಲ್ಲಿ ಅಸಹಿಷ್ಣುತೆಯ ಸಮಸ್ಯೆಯಿಲ್ಲ ಎಂದು ನನಗನಿಸುತ್ತದೆ’’ ಎಂದೂ ಅವರು ಹೇಳಿದರು.
ತುರ್ತು ಪರಿಸ್ಥಿತಿಯ ಹಿನ್ನೆಲೆಯುಳ್ಳ ಭಂಡಾರ್ಕಾರ್ ಅವರ ಚಲನಚಿತ್ರ ‘ಇಂದು ಸರ್ಕಾರ್’ದಲ್ಲಿ ಕಾಂಗ್ರೆಸ್ ನಾಯಕರನ್ನು ಕೆಟ್ಟ ದೃಷ್ಟಿಯಿಂದ ಬಿಂಬಿಸಲಾಗಿದೆಯೆಂದು ಆರೋಪಿಸಿ ಕಳೆದ ವರ್ಷ ಪಕ್ಷದ ಕಾರ್ಯಕರ್ತರು ಚಿತ್ರದ ವಿರುದ್ಧ ಪ್ರತಿಭಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.







