ಸರಕಾರ ಸುಭದ್ರವಾಗಿದೆ, ಯಾರೂ ಪಕ್ಷ ತೊರೆಯುವುದಿಲ್ಲ: ಡಾ.ಜಿ.ಪರಮೇಶ್ವರ್

ತುಮಕೂರು, ಡಿ.24: ರಮೇಶ್ ಜಾರಕಿಹೊಳಿ ವಿಚಾರವಾಗಿ ಮಾಧ್ಯಮಗಳ ಸುದ್ದಿ ಸತ್ಯಕ್ಕೆ ದೂರವಾದದ್ದು. ಸಂಪುಟ ವಿಸ್ತರಣೆ ವೇಳೆ ಅಸಮಾಧಾನ ಸಾಮಾನ್ಯ. ಅವರನ್ನು ಸಮಾಧಾನಪಡಿಸುವ ಕೆಲಸವನ್ನು ಪಕ್ಷ ಮಾಡಲಿದೆ. ಒಂದು ವಾರದ ಬಳಿಕ ಎಲ್ಲವೂ ಸಾಮಾನ್ಯ ಸ್ಥಿತಿಗೆ ಬರಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವ ಸಂಪುಟ ಸೇರಲು ಹಿರಿಯರು, ಕಿರಿಯರು ಎಲ್ಲರಿಗೂ ಸಾಮರ್ಥ್ಯವಿದೆ. ಆದರೆ ಈ ವಿಚಾರವಾಗಿ ವರಿಷ್ಠರ ನಿರ್ಧಾರದಂತೆ ನಡೆದುಕೊಳ್ಳಬೇಕಿದೆ. ಸಂಪುಟ ವಿಸ್ತರಣೆ ವೇಳೆ ಅಸಮಾಧಾನ ಸಾಮಾನ್ಯವಾಗಿರುತ್ತದೆ. ಪ್ರತಿಯೊಬ್ಬರಿಗೂ ಸಚಿವರಾಗುವ ಆಕಾಂಕ್ಷೆ ಇರುತ್ತದೆ. ಹಾಗೆಂದು ಪಕ್ಷ ತೊರೆದು ಹೋಗುವ ವಿಚಾರ ಸುಳ್ಳು. ನಾನೂ ಕೆಲ ಶಾಸಕರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಯಾರೂ ಸಹ ಪಕ್ಷ ಬಿಡುವ ಬಗ್ಗೆ ಹೇಳಿಲ್ಲ ಎಂದರು.
ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ಕೈತಪ್ಪಲು ನಾನಾಗಲಿ ಅಥವಾ ಕೃಷ್ಣಭೈರೇಗೌಡ ಆಗಲಿ ಕಾರಣರಲ್ಲ. ಪ್ರತಿಯೊಂದೂ ವರಿಷ್ಠರ ನಿರ್ಧಾರ. ನಮ್ಮ ಬಳಿ ಸಲಹೆ ಕೇಳಬಹುದು. ಆದರೆ ಅದೇ ಅಂತಿಮವಾಗುವುದಿಲ್ಲ. ಸಂಪುಟ ವಿಸ್ತರಣೆಯಲ್ಲಿ ಯಾರದ್ದೂ ಕೈ ಮೇಲಲ್ಲ. ವರಿಷ್ಠರು ತಮ್ಮ ವಿವೇಚನೆಯಂತೆ ಮಾಡಿದ್ದಾರೆ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.
ಶಾಸಕರು ಯಾರೂ ಪಕ್ಷ ತೊರೆಯುತ್ತಿಲ್ಲ. ನಮ್ಮ ಸರಕಾರ ಸುಭದ್ರವಾಗಿದೆ. ಇನ್ನೆರಡು ದಿನಗಳಲ್ಲಿ ಖಾತೆ ಹಂಚಿಕೆ ಪೂರ್ಣವಾಗಲಿದೆ. ಅಸಮಾಧಾನ ಕೂಡ ಶಮನವಾಗಲಿದೆ ಎಂದರು.







