ಸೋಮೇಶ್ವರ ಬೀಚ್‌ನಲ್ಲಿ ಪುಟಾಣಿ ಬಾಲಕಿ ಸಮುದ್ರಪಾಲು, ಮೂವರ ರಕ್ಷಣೆ
ಸೆಲ್ಫಿ ತೆಗೆಯುವ ಸಂದರ್ಭ ಸಂಭವಿಸಿದ ದುರಂತ

ಉಳ್ಳಾಲ,ಡಿ.24: ಸೋಮೇಶ್ವರ ಕಡಲಕಿನಾರೆಗೆ ವಿಹಾರಕ್ಕೆ ಬಂದಿದ್ದ ಕುಟುಂಬವೊಂದು ಸಮುದ್ರಬದಿಯ ಬಂಡೆಯೊಂದರಲ್ಲಿ ಕುಳಿತುಕೊಂಡಿದ್ದಾಗ ಸಮುದ್ರ ಅಲೆಯು ಅಪ್ಪಲಿಸಿ 4ರ ಹರೆಯದ ಬಾಲಕಿ ನೀರು ಪಾಲಾಗಿದ್ದು, ದಂಪತಿ ಹಾಗೂ ಇನ್ನೊರ್ವ ಬಾಲಕಿಯನ್ನು ಜೀವರಕ್ಷಕ ಸಿಬ್ಬಂದಿರ್ಯೊವರು ಜೀವಪಣಕ್ಕಿಟ್ಟು ರಕ್ಷಿಸಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಮೂಲತಃ ಮಹಾರಾಷ್ಟ್ರ ಸಾಂಗ್ಲೀ ಮೂಲದ ಚಿಂತಾಮಣಿ ಕೇಟ್ಕರ್ ಮತ್ತು ಶ್ರದ್ಧಾ ಕೇಟ್ಕರ್ ರ ಕಿರಿಯ ಮಗಳು ಮೈತ್ರಿ ಕೇಟ್ಕರ್(4) ಎಂಬಾಕೆ ಮೃತಪಟ್ಟವಳಾಗಿದ್ದಾಳೆ. ಚಿಂತಾಮಣಿ ಕೇಟ್ಕರ್ ಬೆಂಗಳೂರಿನ ಖಾಸಗಿ(ಏರೋ ಸ್ಪೇಸ್ ಇಂಜಿನಿಯರ್) ಕಂಪೆನಿಯ ಉದ್ಯೋಗಿಯಾಗಿದ್ದು ನಗರದ ಬನಶಂಕರಿಯಲ್ಲಿ ನೆಲೆಸಿದ್ದರು. ದಂಪತಿಗಳು ರಜೆಯಿದ್ದ ಕಾರಣ ಮಕ್ಕಳಾದ ಗಾರ್ಗಿ ಕೇಟ್ಕರ್ ಹಾಗೂ ಮೈತ್ರಿ ಕೇಟ್ಕರ್ ಜೊತೆ ಮಂಗಳೂರಿಗೆ ಪ್ರವಾಸಕ್ಕೆ ಬಂದಿದ್ದು ಸೋಮವಾರ ಬೆಳಿಗ್ಗೆ ಸೋಮೇಶ್ವರಕ್ಕೆ ಬಂದಿದ್ದರು. ಸಮುದ್ರದ ಬದಿಯ ಬಂಡೆಯೊಂದರ ಬಳಿ ಕುಳಿತು ಸೆಲ್ಫಿ ತೆಗೆಯುವ ಸಂದರ್ಭ ರಭಸದ ಅಲೆಯೊಂದು ಅಪ್ಪಳಿಸಿ ನಾಲ್ಕು ಜನರನ್ನು ಸೆಳೆದುಕೊಂಡು ಹೋಗಿತ್ತು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಈಜು ರಕ್ಷಕ ದಳದ ಸಿಬ್ಬಂದಿ ಅಶೋಕ್ ಎಂಬವರು ಜೀವದ ಹಂಗು ತೊರೆದು ಈ ನಾಲ್ಬರ ರಕ್ಷಣೆಗೆ ನೀರಿಗೆ ದುಮುಕಿ ಮೂವರನ್ನು ರಕ್ಷಿಸಿದ್ದು, ಆದರೆ ಇದೇ ಸಂದರ್ಭದಲ್ಲಿ ಮೈತ್ರಿ ಕೇಟ್ಕರ್ ಕೊನೆಯುಸಿರೆಳೆದಿದ್ದರು. ರಕ್ಷಣೆಗೊಳಗಾದರವರಲ್ಲಿ ಬಾಲಕಿ ಗಾರ್ಜಿ ಕೇಟ್ಕರ್(6) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಲ್ಕು ಜನರು ಸಮುದ್ರಪಾಲಾಗಿರುವ ಬಗ್ಗೆ ಬೊಬ್ಬೆ ಕೇಳಿದಾಗ ತಡವರಿಸದೆ ಈಜುರಕ್ಷಣೆಯ ಥರ್ಮಕೋಲಿನ ಕ್ಯಾನನ್ನು ಹಿಡಿದು ರಕ್ಷಣೆ ಮಾಡಲು ಪ್ರಯತ್ನಿಸಿದ್ದೇನೆ. ರಕ್ಷಣೆಯ ಸಂದರ್ಭದಲ್ಲಿ ಗಾರ್ಗಿಯನ್ನು ಮೇಲಕ್ಕೆ ತರುವಾಗ ಬಲವಾದ ಅಲಯೊಂದು ಅಪ್ಪಲಿಸಿದ ಕಾರಣ ನನಗೆ ಮತ್ತು ಗಾರ್ಗಿಗೆ ಬಲವಾದ ಏಟು ಬಿದ್ದಿತ್ತು. ನೋವಿನ ನಡುವೆಯೂ ಮೈತ್ರಿಯನ್ನು ಮೇಲಕ್ಕೆ ತಂದು ಪ್ರಥಮ ಚಿಕಿತ್ಸೆ ನೀಡಿದ್ದೇನೆ. ಆದರೆ ಆಕೆ ನನ್ನ ಕೈಯಲ್ಲೇ ಕೊನೆಯುಸಿರೆಳೆದಿರುವುದು ಅತೀವ ಬೇಸರ ತಂದಿದೆ.
-ಅಶೋಕ್, ಈಜು ರಕ್ಷಕ ಸಿಬ್ಬಂದಿ