ಸೈಕಲ್ ನಲ್ಲೇ ಅತ್ಯಂತ ವೇಗವಾಗಿ ಪ್ರಪಂಚ ಸುತ್ತಿದ ಭಾರತದ ಮಹಿಳೆ
ಆಸ್ಟ್ರೇಲಿಯಾದ ಪರ್ತ್ ನಿಂದ ಕೊಲ್ಕತ್ತಾವರೆಗೆ ಸಾಹಸಮಯ ಪಯಣ
![ಸೈಕಲ್ ನಲ್ಲೇ ಅತ್ಯಂತ ವೇಗವಾಗಿ ಪ್ರಪಂಚ ಸುತ್ತಿದ ಭಾರತದ ಮಹಿಳೆ ಸೈಕಲ್ ನಲ್ಲೇ ಅತ್ಯಂತ ವೇಗವಾಗಿ ಪ್ರಪಂಚ ಸುತ್ತಿದ ಭಾರತದ ಮಹಿಳೆ](https://www.varthabharati.in/sites/default/files/images/articles/2018/12/24/169501.jpg)
ಪುಣೆ, ಡಿ.24: ಸೈಕಲಿನಲ್ಲಿ ಅತ್ಯಂತ ವೇಗವಾಗಿ ವಿಶ್ವಪರ್ಯಟನೆಗೈದ ಮೊದಲ ಏಷ್ಯನ್ ಎಂಬ ಹೆಗ್ಗಳಿಕೆಗೆ ಪುಣೆಯ 20 ವರ್ಷದ ಯುವತಿ ವೇದಾಂಗಿ ಕುಲಕರ್ಣಿ ಪಾತ್ರರಾಗಿದ್ದಾರೆ. ಜುಲೈ ತಿಂಗಳಲ್ಲಿ ಆಸ್ಟ್ರೇಲಿಯಾದ ಪರ್ತ್ ನಗರದಿಂದ ತಮ್ಮ ಪರ್ಯಟನೆ ಆರಂಭಿಸಿದ ವೇದಾಂಗಿ ರವಿವಾರ ಕೊಲ್ಕತ್ತಾ ತಲುಪಿದ್ದು, ಇಲ್ಲಿಯ ತನಕ 29,000 ಕಿಮೀ ದೂರ ಪ್ರಯಾಣಿಸಿದ್ದಾರೆ. ಆಕೆ ತಮ್ಮ ಪರ್ಯಟನೆ ಪೂರ್ಣಗೊಳಿಸಲು ಮತ್ತೆ ಪರ್ತ್ ನಗರಕ್ಕೆ ತೆರಳಲಿದ್ದಾರೆ.
ತಾವು ಒಟ್ಟು 159 ದಿನ ವಿಶ್ವ ಪರ್ಯಟನೆ ಕೈಗೊಂಡಿದ್ದು, ಪ್ರತಿ ದಿನ 300 ಕಿಮೀ ದೂರದ ತನಕ ಸೈಕ್ಲಿಂಗ್ ನಡೆಸಿದ್ದು ಇಲ್ಲಿಯ ತನಕ 14 ದೇಶಗಳನ್ನು ಸುತ್ತಿದ್ದಾಗಿ ಅವರು ತಿಳಿಸಿದ್ದಾರೆ.
ಇಂಗ್ಲೆಂಡ್ನ ಯುನಿವರ್ಸಿಟಿ ಆಫ್ ಬೌರ್ನೆಮೌತ್ ಇಲ್ಲಿನ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಪದವಿ ವಿದ್ಯಾರ್ಥಿನಿಯಾಗಿರುವ ವೇದಾಂಗಿ ತಮ್ಮ ಸೈಕಲ್ ಯಾತ್ರೆಗೆ ಎರಡು ವರ್ಷಗಳಿಂದ ಪೂರ್ವತಯಾರಿ ಆರಂಭಿಸಿದ್ದು ಅದಕ್ಕೆಂದೇ ವಿಶೇಷವಾಗಿ ಸೈಕಲ್ ಅನ್ನು ವಿನ್ಯಾಸ ಮಾಡಿಸಿದ್ದರು.
ಶೇ. 80ರಷ್ಟು ಪರ್ಯಟನೆಯನ್ನು ಏಕಾಂಗಿಯಾಗಿ ಆಕೆ ಮಾಡಿದ್ದು, ಆಕೆಯ ಸೈಕಲ್ ನಲ್ಲಿ ಭಾರೀ ತೂಕದ ಸೈಕಲ್ ಸಾಮಗ್ರಿಗಳ ಪೆಟ್ಟಿಗೆ, ಕ್ಯಾಂಪಿಂಗ್ ಸಾಮಗ್ರಿ, ಬಟ್ಟೆ ಬರೆಗಳಿದ್ದು ಅತ್ಯಂತ ನಿರ್ಜನ ಪ್ರದೇಶಗಳಲ್ಲೂ ಒಬ್ಬಂಟಿಯಾಗಿ ಪಯಣಿಸಿದ್ದಾರೆ. ಅವರ ಪ್ರಯಾಣ ವೆಚ್ಚವನ್ನು ಹೆಚ್ಚು ಕಡಿಮೆ ಅವರ ಹೆತ್ತವರೇ ಭರಿಸಿದ್ದಾರೆ.
ಪರ್ತ್ ನಗರದಿಂದ ಆರಂಭಗೊಂಡು ಆಸ್ಟ್ರೇಲಿಯಾದ ಹಲವೆಡೆ ಪಯಣಿಸಿ ಬ್ರಿಸ್ಬೇನ್ ತಲುಪಿ ಅಲ್ಲಿಂದ ನ್ಯೂಝಿಲ್ಯಾಂಡ್ ಗೆ ವಿಮಾನದಲ್ಲಿ ಪಯಣಿಸಿ ನಂತರ ಇಡೀ ನ್ಯೂಝಿಲ್ಯಾಂಡ್ ಅನ್ನು ತಮ್ಮ ಸೈಕಲ್ ನಲ್ಲಿ ವೇದಾಂಗಿ ಸುತ್ತಿದ್ದರು. ನಂತರ ಕೆನಡಾಗೆ ವಿಮಾನದಲ್ಲಿ ಪಯಣಿಸಿ ಅಲ್ಲಿ ಸೈಕಲ್ ಪರ್ಯಟನೆ ನಡೆಸಿ ನಂತರ ಯುರೋಪ್ ಗೆ ಆಗಮಿಸಿ ಪೋರ್ಚುಗಲ್, ಸ್ಪೇನ್, ಫ್ರಾನ್ಸ್, ಬೆಲ್ಜಿಯಂ, ಜರ್ಮನಿ, ಡೆನ್ಮಾರ್ಕ್, ಸ್ವೀಡನ್ ಹಾಗೂ ಫಿನ್ಲ್ಯಾಂಡ್ ಗೆ ಸೈಕಲ್ ಮೂಲಕವೇ ಪಯಣಿಸಿ ರಷ್ಯಾ ತಲುಪಿ ಅಲ್ಲಿಂದ ಭಾರತಕ್ಕೆ ವಿಮಾನದಲ್ಲಿ ಆಗಮಿಸಿ ಇಲ್ಲಿ ತಮ್ಮ ಪರ್ಯಟನೆಯ ಕೊನೆಯ ಹಂತವನ್ನು ಪೂರೈಸಿದ್ದಾರೆ.
ಬ್ರಿಟಿಷ್ ಸಾಹಸಿ ಜೆನ್ನಿ ಗ್ರಹಾಂ ಇದೇ ವರ್ಷ ಸೈಕಲ್ ನಲ್ಲಿ ವಿಶ್ವ ಪರ್ಯಟನೆಯನ್ನು 124 ದಿನಗಳಲ್ಲಿ ಪೂರೈಸಿದ್ದರು.