ಮಾಹಿತಿ ಕೊರತೆಯಿಂದ ನ್ಯಾಯದಾನದಲ್ಲಿ ವಿಳಂಬ: ನ್ಯಾ. ಅಬ್ದುಲ್ ನಝೀರ್
*ಡಾ.ಎಂ.ವೀರಪ್ಪ ಮೊಯ್ಲಿಯವರ ‘ದಿ ವೀಲ್ ಆಫ್ ಜಸ್ಟಿಸ್’ ಕೃತಿ ಬಿಡುಗಡೆ

ಮಂಗಳೂರು, ಡಿ.24: ಕಾನೂನಿನ ಕುರಿತಂತೆ ಮಾಹಿತಿಯ ಕೊರತೆ ಹಾಗೂ ಆರ್ಥಿಕ ಸಮಸ್ಯೆ ದೇಶದಲ್ಲಿ ನ್ಯಾಯದಾನದಲ್ಲಿ ವಿಳಂಬಕ್ಕೆ ಕಾರಣ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಎಸ್. ಅಬ್ದುಲ್ ನಝೀರ್ ವಿಶ್ಲೇಷಿಸಿದ್ದಾರೆ. ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿಂದು ಕೇಂದ್ರ ಮಾಜಿ ಸಚಿವ ಡಾ.ಎಂ.ವೀರಪ್ಪ ಮೊಯ್ಲಿಯವರ ‘ದಿ ವೀಲ್ ಆಫ್ ಜಸ್ಟೀಸ್’ ಕೃತಿ ಅನಾವರಣಗೊಳಿಸಿ ಅವರು ಮಾತನಾಡುತ್ತಿದ್ದರು.
ಸದ್ಯ ನ್ಯಾಯಾಂಗ ವ್ಯವಸ್ಥೆಯಲ್ಲೂ ಸಾಕಷ್ಟು ಬದಲಾವಣೆ ಹಾಗೂ ಪ್ರಗತಿ ಆಗಿರುವುದರಿಂದ ನ್ಯಾಯದಾನ ಪ್ರಕ್ರಿಯೆಯಲ್ಲಿ ವೇಗ ಹೆಚ್ಚಿದೆ. ಡಾ.ಮೊಯ್ಲಿಯವರ ಈ ಪುಸ್ತಕ ರಾಷ್ಟ್ರ ಮಟ್ಟದ ಶಾಲೆಗಳಲ್ಲಿ ಚರ್ಚಾ ವಿಷಯವಾಗುವ ಮೂಲಕ ನ್ಯಾಯಾಂಗ ವ್ಯವಸ್ಥೆಯಲ್ಲಿನ ನ್ಯೂನತೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.
ಪುಸ್ತಕ ಜಗತ್ತಿನ ಕಾನೂನು ವಿದ್ವಾಂಸರ ಜಾನಪದ ಸಂಚಯ
ಕೃತಿಕರ್ತ ಡಾ.ಎಂ.ವೀರಪ್ಪ ಮೊಯ್ಲಿ ಮಾತನಾಡಿ, ವಕೀಲನಾಗಿ, ಕಾನೂನು ಸಚಿವನಾಗಿ ಪಡೆದ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗಳಿಸಿದ ಅನುಭವಗಳನ್ನು ಸಮೀಕರಿಸಿ, ಸಂಶೋಧನೆ ನಡೆಸಿ, ಅಂತರ್‌ರಾಷ್ಟ್ರೀಯ ಮಟ್ಟದ ಕಾನೂನು ತಜ್ಞರ ಜತೆ ಅಭ್ಯಾಸ ಮಾಡಿ ಈ ಪುಸ್ತಕವನ್ನು ನಾನು ಬರೆದಿದ್ದೇನೆ. ಇದರಿಂದ ಇದು ಕೇವಲ ನನ್ನ ಕೊಡುಗೆ ಅಲ್ಲ. ಇದು ಜಗತ್ತಿನ ಕಾನೂನು ವಿದ್ವಾಂಸರ ಜಾನಪದ ಸಂಚಯ ಎಂದು ತಮ್ಮ ಕೃತಿಯ ಬಗ್ಗೆ ವ್ಯಾಖ್ಯಾನಿಸಿದರು.
ವೇದಿಕೆಯಲ್ಲಿ ಜಿಲ್ಲಾ ನ್ಯಾಯಾಧೀಶ ನ್ಯಾ.ಕಡೂರು ಸತ್ಯನಾರಾಯಣ ಆಚಾರ್, ನ್ಯಾಯವಾದಿ ಎಂ.ಕೆ.ವಿಜಯ ಕುಮಾರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ನ್ಯಾಯವಾದಿಗಳಾದ ಪಿ.ಪಿ.ಹೆಗ್ಡೆ, ದಿನಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಬಲ್ಲಾಳ್ ಸ್ವಾಗತಿಸಿದರು. ಈ ಸಂದರ್ಭ ಜಿಲ್ಲಾ ನ್ಯಾಯಾಲಯಕ್ಕೆ ನೇರ ನೇಮಕಾತಿಗೊಂಡಿರುವ ನೂತನ ಜಿಲ್ಲಾ ನ್ಯಾಯಾಧೀಶ ಯಾದವ ಕರ್ಕೇರನ್ನು ಸವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಎಸ್. ಅಬ್ದುಲ್ ನಝೀರ್ ಅಭಿನಂದಿಸಿದರು. ಮಂಗಳೂರು ವಕೀಲರ ಸಂಘದ ವತಿಯಿಂದ ಡಾ.ಎಂ.ವೀರಪ್ಪ ಮೊಯ್ಲಿಯವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಮೊಯ್ಲಿ ಪ್ರಧಾನಿಯಾಗಲಿ: ನ್ಯಾ.ಅಬ್ದುಲ್ ನಝೀರ್ ಶುಭ ಹಾರೈಕೆ
ಡಾ.ಎಂ.ವೀರಪ್ಪ ಮೊಯ್ಲಿ ಆಲ್ ಇನ್ ವನ್ ವ್ಯಕ್ತಿತ್ವದವರು. ಅವರು ಈಗಾಗಲೇ ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ಸಾಹಿತಿಯಾಗಿ, ಸಮಾಜ ಸೇವಕನಾಗಿ ಗುರುತಿಸಿಕೊಂಡಿದ್ದಾರೆ. ರಾಜಕೀಯದ ಎಲ್ಲಾ ಮಗ್ಗಲುಗಳನ್ನು ಪ್ರವೇಶಿಸಿರುವ ಅವರು ಅಲಂಕರಿಸಲು ಉಳಿದಿರುವುದು ಪ್ರಧಾನ ಮಂತ್ರಿ, ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿ ಹುದ್ದೆ ಮಾತ್ರ. ಅವರು ಮುಂದೆ ಪ್ರಧಾನಿಯಾಗಲಿ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಎಸ್. ಅಬ್ದುಲ್ ನಝೀರ್ ಶುಭ ಹಾರೈಸಿದರು.
ತುಳು ಮಾತನಾಡಲು ಮರೆಯದ ನ್ಯಾ. ಅಬ್ದುಲ್ ನಝೀರ್
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸ್ವಾಗತ, ಕಾರ್ಯಕ್ರಮ ನಿರ್ವಹಣೆ ಎಲ್ಲವೂ ಆಂಗ್ಲ ಭಾಷೆಯಲ್ಲೇ ಸಾಗಿತ್ತು. ಹಾಗಿದ್ದರೂ, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿರುವ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ತಮ್ಮ ಮಾತನ್ನು ಆರಂಭಿಸುವಾಗಲೇ ‘ಮಾತೆರೆಗ್ಲಾ ನಮಸ್ಕಾರ’ ಎಂದು ತುಳುವಿನಲ್ಲಿ ಮಾತು ಆರಂಭಿಸಿದರು