ಬಡ ಬೀಡಿ ಕಾರ್ಮಿಕರಿಗಾಗಿ ಜೈಲಿಗೆ ಹೋಗಲೂ ತಯಾರಿದ್ದೇವೆ: ಜೆಡಿಎಸ್ ಮುಖಂಡ ಅಶ್ರಫ್

ಪುತ್ತೂರು,ಡಿ.24: ಬಡ ಬೀಡಿ ಕಾರ್ಮಿಕರ ನ್ಯಾಯಕ್ಕಾಗಿ ನಾವು ಜೈಲಿಗೆ ಹೋಗಲೂ ಸಿದ್ದರಿದ್ದೇವೆ ಹಾಗೂ ಅವರಿಗೆ ಸಿಗಬೇಕಾದ ಕನಿಷ್ಠ ಕೂಲಿ ಮತ್ತು ತುಟ್ಟಿ ಭತ್ತೆಯನ್ನು ಕಂಪೆನಿಗಳು ನೀಡದಿದ್ದರೆ ಎಲ್ಲಾ ಕಂಪೆನಿಗಳಿಗೂ ಬೀಗ ಜಡಿದು ಹೋರಾಟ ನಡೆಸುತ್ತೇವೆ ಎಂದು ಜೆಡಿಎಸ್ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಅಶ್ರಫ್ ಕಲ್ಲೇಗ ಹೇಳಿದರು.
ಅವರು ಸೋಮವಾರ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ, ಬೀಡಿ ಕಂಪೆನಿಗಳು ಕಾರ್ಮಿಕರಿಗೆ ಕನಿಷ್ಠ ಕೂಲಿ ಹಾಗೂ ತುಟ್ಟಿ ಭತ್ತೆ ನೀಡದೆ ಶೋಷಣೆ ಮಾಡುತ್ತಿರುವ ವಿರುದ್ದ ಜೆಡಿಎಸ್ ಹಾಗೂ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ಜಂಟಿ ಆಶ್ರಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಕರಾವಳಿ ಭಾಗದ ಹೆಚ್ಚಿನ ಮಹಿಳೆಯರು ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದಾರೆ. ಸರಕಾರವು ಅವರಿಗೆ ಪ್ರತಿ ಸಾವಿರ ಬೀಡಿಗೆ 220 ರೂಪಾಯಿ ವೇತನ ನಿಗದಿಪಡಿಸಿದ್ದು, ಆದರೆ ಕಂಪೆನಿಗಳು ಕೇವಲ 162 ರೂಪಾಯಿ ನೀಡುತ್ತಿದೆ. 2015ರಲ್ಲಿ ರಾಜ್ಯ ಸರಕಾರ ಬೀಡಿ ಕಾರ್ಮಿಕರಿಗೆ ರೂ. 12.75 ತುಟ್ಟಿ ಭತ್ಯೆಯನ್ನು ಏರಿಕೆ ಮಾಡಿದ್ದು, ಅದನ್ನು ಕಂಪೆನಿಗಳು ಕಾರ್ಮಿಕರಿಗೆ ನೀಡದೆ ವಂಚನೆ ಮಾಡುತ್ತಿವೆ. ಬೀಡಿ ಕಂಪೆನಿಗಳ ಜೊತೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು. ಬೀಡಿ ಕಾರ್ಮಿಕರಿಗೆ ನ್ಯಾಯ ಒದಗಿಸದಿದ್ದಲ್ಲಿ ಕಂಪೆನಿಗಳಿಗೆ ಬೀಗ ಜಡಿದು ಹೋರಾಟ ಮಾಡುತ್ತೇವೆ. ಬೀಡಿ ಕಂಪೆನಿಗಳ ಜತೆ ಶಾಮೀಲಾಗಿರುವ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮಕೈಗೊಳ್ಳಬೇಕು ಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತೇವೆ ಎಂದು ಎಚ್ಚರಿಸಿದರು.
ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಅಧ್ಯಕ್ಷ ಗಿರಿಧರ್ ನಾಯ್ಕ್ ಮಾತನಾಡಿ, ಬೀಡಿ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಅನೇಕ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ. ಇದೀಗ ಜೆಡಿಎಸ್ ಹಾಗೂ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಒಟ್ಟಾಗಿ ಹೋರಾಟ ಮುಂದುವರಿಸಲಾಗಿದೆ. ಬೀಡಿ ಕಂಪೆನಿಗಳು 15 ದಿನಗಳಲ್ಲಿ ಕನಿಷ್ಠ ವೇತನ ಹಾಗೂ ತುಟ್ಟಿ ಭತ್ಯೆಯನ್ನು ನೀಡಬೇಕು. ಇಲ್ಲದಿದ್ದಲ್ಲಿ ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕುಗಳ ಎಲ್ಲಾ ಸಂಘಟನೆಗಳೊಂದಿಗೆ ಎಲ್ಲಾ ಬೀಡಿ ಕಂಪೆನಿಗಳಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು. ಬೀಡಿ ಕಂಪೆನಿಗಳಿಂದ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಸಹಾಯಕ ಆಯುಕ್ತರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಬೀಡಿ ಕಾರ್ಮಿಕರ ಸಂಘದ ಉಪಾಧ್ಯಕ್ಷೆ ಈಶ್ವರಿ ಶಂಕರ್ ಮಾತನಾಡಿ, ಬೀಡಿ ಕಾರ್ಮಿಕರಿಗೆ ಕನಿಷ್ಠ ಕೂಲಿ ಮತ್ತು ಭತ್ಯೆಯನ್ನು ನೀಡುವಂತೆ ಸರಕಾರ ಆದೇಶ ಮಾಡಿದ್ದರೂ ಅಧಿಕಾರಿಗಳು ಅದನ್ನು ಪಾಲಿಸಿದೆ ಸುಮ್ಮನಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಕೇಸು ಮಾಡಲು ಅವಕಾಶವಿದೆ. ಕಾರ್ಮಿಕರಿಗೆ ನೀಡಲು ಬಾಕಿಯಿರುವ ರೂ. 12,000ಗಳನ್ನು ಕೂಡಲೇ ವಿತರಿಸಬೇಕು ಎಂದು ಅವರು ಹೇಳಿದರು.
ಜೆಡಿಎಸ್ ಮುಖಂಡರಾದ ರಾಧಾಕೃಷ್ಣ ಸಾಲಿಯಾನ್, ಶಿವು ಸಾಲಿಯಾನ್, ಹರೀಶ್ ಕೊಟ್ಟಾರಿ, ಜಯರಾಜ್ ಅಮೀನ್, ಪದ್ಮಮಣಿ, ಪ್ರಜ್ಞಾ, ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ಉಮೇಶ್ ತ್ಯಾಗರಾಜ್, ಪರಮೇಶ್ವರ ಮೊದಲಾದವರು ಉಪಸ್ಥಿತರಿದ್ದರು. ಜೆಡಿಎಸ್‍ನ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಅಶ್ರಫ್ ಕೊಟ್ಯಾಡಿ ಸ್ವಾಗತಿಸಿ, ವಂದಿಸಿದರು.







