ನಾವು ಮುಸ್ಲಿಮ್ ವಿರೋಧಿ ಅಲ್ಲ: ಮಾಜಿ ಪ್ರಧಾನಿ ದೇವೇಗೌಡ

ಬೆಂಗಳೂರು, ಡಿ.24: ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ಹಾಗಾಗಿ, ಸಮ್ಮಿಶ್ರ ಸರಕಾರ ರಾಜ್ಯದಲ್ಲಿ ಸುಭದ್ರವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ಸೋಮವಾರ ಶೇಷಾದ್ರಿಪುರಂನ ಜೆಡಿಎಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರು ಯಾರೂ ಸಹ ರಾಜೀನಾಮೆ ನೀಡುವುದಿಲ್ಲ. ಹೀಗಾಗಿ ಮೈತ್ರಿ ಸರಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂಬರುವ ಲೋಕಸಭಾ ಚುನಾವಣೆಗೆ ಎಲ್ಲ ತಯಾರಿಯನ್ನು ಮಾಡಿಕೊಳ್ಳಲಾಗುತ್ತಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಮೈತ್ರಿಯಾಗಿದ್ದೇವೆ. ಚುನಾವಣೆ ಸಿದ್ಧತೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಎಲ್ಲ ಕಡೆ ಓಡಾಡುತ್ತಿದ್ದಾರೆ. ಜೊತೆಗೆ, ಚಿಕ್ಕಮಗಳೂರಿನಲ್ಲಿ ಪಂಚಾಯತ್ ಚುನಾವಣೆ ಇದೆ. ಆ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಸಚಿವ ಸಂಪುಟ ವಿಸ್ತರಣೆಯನ್ನು ಪಕ್ಷದ ವರಿಷ್ಠರು, ಕಾಂಗ್ರೆಸ್ ಮುಂಖಡರು ಮಾಡಿಕೊಳ್ಳುತ್ತಾರೆ. ಜೆಡಿಎಸ್ ಚಿಕ್ಕ ಪಕ್ಷ. ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ. ಆದರೆ, ಸದ್ಯಕ್ಕಿಲ್ಲ ಎಂದ ಅವರು, ನಮ್ಮ ಪ್ರಾದೇಶಿಕ ಪಕ್ಷ 1998 ರಲ್ಲಿ ಹಲವು ಕಾರ್ಯಕ್ರಮ ನೀಡಿತ್ತು. ಅಂದು 16 ಲೋಕಸಭಾ ಸ್ಥಾನ ಗೆದ್ದಿದ್ದೆವು. ಆದರೆ, ದುರ್ದೈವ ಈಗ 2 ಸ್ಥಾನ ಮಾತ್ರ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಪಕ್ಷಕ್ಕಾಗಿ ತಯಾರಿ: ಜೆಡಿಎಸ್ ಪಕ್ಷವನ್ನು ಕಟ್ಟಲು ಅನೇಕ ರೀತಿಯಲ್ಲಿ ತಯಾರಿ ನಡೆಸುತ್ತಿದ್ದೇವೆ. ಪ್ರತಿದಿನ ನಮ್ಮ ಜೊತೆ ಕುಮಾರಸ್ವಾಮಿ ಇರಲಿದ್ದಾರೆ. ಅವರ ಅನುಮತಿ ಪಡೆದೆ ಸಭೆ ನಡೆಸುತ್ತಿದ್ದೇವೆ ಎಂದು ಹೇಳಿದರು.
‘ಮುಸ್ಲಿಮ್ ವಿರೋಧಿ ಅಲ್ಲ’
ನಾವು ಮುಸ್ಲಿಮ್ ವಿರೋಧಿ ಅಲ್ಲ. ಈ ರಾಷ್ಟ್ರದಲ್ಲಿ ಮಹಿಳೆಯರಿಗೆ ಮೀಸಲಾತಿ ತಂದಿದ್ದು ಜನತಾದಳ. ರಾಜಕೀಯ ಮೀಸಲಾತಿ, ಹೆಣ್ಣು ಮಕ್ಕಳಿಗೆ ಮೀಸಲಾತಿ, ಮುಸ್ಲಿಮ್ ಬಾಂಧವರೆಲ್ಲರನ್ನು ಗಮನದಲ್ಲಿಟ್ಟುಕೊಂಡು ಆಡಳಿತ ನಡೆಸಿಕೊಂಡು ಹೋಗುತ್ತಿದ್ದೇವೆ. ಆದರೆ, ಕೆಲವರು ನಮ್ಮದು ಜಾತಿ ಪಕ್ಷ ಎನ್ನುವುದು ಸರಿಯಲ್ಲ.
-ಎಚ್.ಡಿ.ದೇವೇಗೌಡ, ಜೆಡಿಎಸ್ ವರಿಷ್ಠ







