ರಾಷ್ಟ್ರಪತಿ ಆಗಮನ: ಉಡುಪಿ ಪ್ರವಾಸಿ ಮಂದಿರದಲ್ಲಿ ಸಿದ್ಧತೆ

ಉಡುಪಿ, ಡಿ.24: ಉಡುಪಿ ಶ್ರೀಕೃಷ್ಣ ಮಠಕ್ಕೆ ಡಿ.27ರಂದು ರಾಷ್ಟ್ರಪತಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಬನ್ನಂಜೆಯ ಪ್ರವಾಸಿ ಮಂದಿರದಲ್ಲಿ ಈಗಾಗಲೇ ಸಿದ್ಧತೆಗಳನ್ನು ನಡೆಸಲಾಗುತ್ತಿವೆ.
ಆದಿಉಡುಪಿ ಹೆಲಿಪ್ಯಾಡ್ ಮೂಲಕ ಆಗಮಿಸಲಿರುವ ರಾಷ್ಟ್ರಪತಿ ಉಡುಪಿ ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ ತೆಗೆದುಕೊಳ್ಳುವ ಸಾಧ್ಯತೆ ಇರುವುದರಿಂದ ಈ ಹಿಂದೆ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಉಡುಪಿಗೆ ಆಗಮಿಸಿ ತಂಗಿದ್ದ ಮಂದಿರದ ಕೊಠಡಿಯನ್ನೇ ನಿಗದಿಪಡಿಸಲಾಗಿದೆ. ಈ ಕೊಠಡಿಯಲ್ಲಿ ಈಗಾಗಲೇ ಐಷಾರಾಮಿ ಸೋಫಾ ಸೆಟ್, ಮಂಚ, ಬೆಡ್, ಡೈನಿಂಗ್ ಟೇಬ್, ಫ್ರಿಡ್ಜ್, ಟಿವಿಗಳನ್ನು ಇರಿಸಲಾಗಿದೆ.
ಪ್ರವಾಸಿ ಮಂದಿರದ ಎಲ್ಲ ಕೊಠಡಿಯನ್ನು ಇಂದಿನಿಂದಲೇ ಖಾಲಿ ಮಾಡಿ ಇರಿಸಲಾಗಿದೆ. ಹೊಸ ಪ್ರವಾಸಿ ಮಂದಿರದಲ್ಲಿ ಎರಡು ವಿವಿಐಪಿ ಹಾಗೂ ಆರು ವಿಐಪಿ ಕೊಠಡಿಗಳಿದ್ದು, ಹಳೆ ಪ್ರವಾಸಿ ಮಂದಿರದಲ್ಲಿ ಒಟ್ಟು ಐದು ಕೊಠಡಿ ಯನ್ನು ಖಾಲಿ ಮಾಡಿ ರಾಷ್ಟ್ರಪತಿ ಜೊತೆ ಆಗಮಿಸುವವರು ತಂಗಲು ಸಜ್ಜು ಗೊಳಿಸಲಾಗಿದೆ.
ಪ್ರವಾಸಿ ಮಂದಿರದ ಒಂದು ಕೊಠಡಿಗೆ ಕರ್ತವ್ಯದಲ್ಲಿ ಬರುವ ಅಧಿಕಾರಿ ಗಳಿಗೆ 350ರೂ. ಹಾಗೂ ಖಾಸಗಿಯಾಗಿ ಆಗಮಿಸುವ ಅಧಿಕಾರಿಗಳಿಗೆ 525 ರೂ. ಶುಲ್ಕವನ್ನು ಲೋಕೋಪಯೋಗಿ ಇಲಾಖೆ ವಿಧಿಸುತ್ತದೆ ಎನ್ನುತ್ತಾರೆ ಪ್ರವಾಸಿ ಮಂದಿರದ ಸಿಬ್ಬಂದಿಗಳು.