ಇನ್ನೂ ಪತ್ತೆಯಾಗದ ಮಲ್ಪೆ ಮೀನುಗಾರಿಕಾ ಬೋಟು: ಕೋಸ್ಟ್ ಗಾರ್ಡ್‌ನಿಂದ ಮುಂದುವರೆದ ಕಾರ್ಯಾಚರಣೆ

ಮಲ್ಪೆ, ಡಿ.24: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ವೇಳೆ ನಾಪತ್ತೆಯಾಗಿರುವ ಬೋಟು ಸಹಿತ ಎಂಟು ಮಂದಿ ಮೀನುಗಾರರ ಹುಡುಕಾಟವು ಮುಂದುವರೆದಿದ್ದು, ಈವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ನಾಪತ್ತೆಯಾದ ಸುವರ್ಣ ತ್ರಿಭುಜ ಎಂಬ ಮೀನುಗಾರಿಕಾ ಬೋಟಿನಲ್ಲಿ ಬೋಟಿನ ಮಾಲಕ ಬಡಾನಿಡಿಯೂರಿನ ಚಂದ್ರಶೇಖರ್(40), ಮೀನುಗಾರರಾದ ದಾಮೋದರ ಬಡಾನಿಡಿಯೂರು (40), ಕುಮುಟಾದ ಲಕ್ಷ್ಮಣ್(45), ಸತೀಶ್(35), ಹರೀಶ್(28), ರಮೇಶ್(30), ಜೋಗಯ್ಯ(40), ರವಿ ಮಂಕಿ(27) ಎಂಬವರಿದ್ದು, ಇವರ ಮನೆ ಮಂದಿ ಆತಂಕಕ್ಕೆ ಒಳಗಾಗಿದ್ದಾರೆ.
ಇವರೆಲ್ಲ ಸುವರ್ಣ ತ್ರಿಭುಜ ಎಂಬ ಮೀನುಗಾರಿಕಾ ಬೋಟಿನಲ್ಲಿ ಡಿ.13 ರಂದು ರಾತ್ರಿ 11 ಗಂಟೆಗೆ ಸುಮಾರಿಗೆ ಮಲ್ಪೆಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದು, ಡಿ.15ರ ರಾತ್ರಿ ಒಂದು ಗಂಟೆಯ ನಂತರ ಇವರೆಲ್ಲ ಸಂಪರ್ಕ ಸಿಗದೇ ನಾಪತ್ತೆಯಾಗಿದ್ದಾರೆ. ಸಮುದ್ರ ತೀರದಿಂದ ಸುಮಾರು 40- 50 ಕಿ.ಮೀ. ದೂರದ ಸಮುದ್ರದ ಗೋವಾ- ರತ್ನಗಿರಿ ಮಾರ್ಗದಲ್ಲಿ ಈ ಬೋಟ್ ನಾಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಮೀನುಗಾರಿಕಾ ಇಲಾಖೆಯವರು ಹಾಗೂ ಪೊಲೀಸರು ಮಂಗಳೂರು ಕೋಸ್ಟ್ ಗಾರ್ಡ್‌ನವರಿಗೆ ಮಾಹಿತಿ ರವಾನಿಸಿದ್ದಾರೆ. ಹಾಗೆ ಮಂಗಳೂರು ಕೋಸ್ಟ್ ಗಾರ್ಡ್‌ನವರು ಗೋವಾ ಕೋಸ್ಟ್ ಗಾರ್ಡ್‌ನವರನ್ನು ಸಂಪರ್ಕಿಸಿದ್ದಾರೆ. ಅದರಂತೆ ನಾಪತ್ತೆಯಾಗಿದ್ದಾರೆನ್ನಲಾದ ಸ್ಥಳದಲ್ಲಿ ತೀವ್ರ ಹುಡುಕಾಟ ನಡೆಯುತ್ತಿದ್ದು, ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
‘ಮಂಗಳೂರು ಕೋಸ್ಟ್ ಗಾರ್ಡ್‌ನ ಅಧಿಕಾರಿಗಳು ನಮ್ಮ ಸಂಪರ್ಕದಲ್ಲಿ ಇದ್ದಾರೆ. ಕಾರ್ಯಾಚರಣೆ ಮುಂದುವರೆಸಲಾಗಿದ್ದು, ಈವರೆಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಗೋವಾ ಕೋಸ್ಟ್ ಗಾರ್ಡ್‌ನವರು ಹುಡುಕಾಟ ನಡೆಸುತ್ತಿದ್ದಾರೆಂಬ ಮಾಹಿತಿ ದೊರೆತಿದೆ’ ಎಂದು ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಪಾಶ್ವರ್ನಾಥ್ ಪತ್ರಿಕೆಗೆ ತಿಳಿಸಿದ್ದಾರೆ.
ಅಪಹರಣ ಶಂಕೆ
ಬೋಟು ಸಮೇತ ಮೀನುಗಾರರು ನಾಪತ್ತೆಯಾಗುತ್ತಿರುವ ಘಟನೆ ಮಲ್ಪೆ ಬಂದರಿನಲ್ಲಿ ಇದೇ ಮೊದಲ ಬಾರಿಗೆ ನಡೆದಿದೆ. ಮಲ್ಪೆಯ ಬೋಟಿನವರು ಗೋವಾ- ರತ್ನಗಿರಿ ಸಮುದ್ರದಲ್ಲಿ ಹುಡುಕಾಟ ನಡೆಸುತ್ತಿದ್ದು, ಅಲ್ಲಿ ಯಾವುದೇ ಸುಳಿವು ಲಭ್ಯವಾಗಿಲ್ಲ. ಒಂದು ವೇಳೆ ಬೋಟು ಮುಳುಗಿರುತ್ತಿದ್ದರೆ ಅಲ್ಲಿ ಡಿಸೇಲ್‌ನ ತೇವಾಂಶ, ಕ್ಯಾನ್ ಅಥವಾ ಬೋಟಿನ ಭಾಗಗಳು ತೇಲುತ್ತಿದ್ದಿರಬಹುದು. ಆದರೆ ಅಂತಹ ಯಾವುದೇ ಬೋಟು ಮುಳುಗಿದ ಲಕ್ಷ್ಮಣಗಳು ಬರುತ್ತಿಲ್ಲ. ಆದುರದಿಂದ ಇವರನ್ನು ಕಡಲ್ಗಳ್ಳರು ಅಪಹರಿಸಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದೆ. ಈ ಸಂಬಂಧ ಶಾಸಕರು, ಅಧಿಕಾರಿಗಳನ್ನು ಸಂಪರ್ಕಿಸಲಾಗಿದೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ತಿಳಿಸಿದ್ದಾರೆ.
ಸಿಎಂ ಸಂಪರ್ಕ: ಪ್ರಮೋದ್ ಮಧ್ವರಾಜ್
ಮಲ್ಪೆಮೀನುಗಾರಿಕಾ ಬೋಟು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯ ಪೋಲಿಸ್ ಮಹಾ ನಿರ್ದೇಶಕಿ ನೀಲಮಣಿಯವರನ್ನು ಫೋನ್ ಮೂಲಕ ಸಂಪರ್ಕಿಸಿ ಮಾಹಿತಿ ನೀಡಲಾಗಿದೆ ಎಂದು ಮಾಜಿ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಈ ಬಗ್ಗೆ ಮೀನುಗಾರ ಮುಖಂಡರು ಮನೆಗೆ ಆಗಮಿಸಿ ಮಾಹಿತಿ ನೀಡಿರುವ ಹಿನ್ನಲೆಯಲ್ಲಿ ಪ್ರಮೋದ್ ಮಧ್ವರಾಜ್ ಇವರಿಬ್ಬರನ್ನು ಸಂಪರ್ಕಿಸಿ, ಈ ವಿಚಾರವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಕರಾವಳಿ ಕಾವಲುಪಡೆ, ಪೋಲಿಸ್ ಇಲಾಖೆಯು ಮೀನುಗಾರರ ಸಹಕಾರದೊಂದಿಗೆ ಮೀನುಗಾರರ ಪತ್ತೆಗೆ ವಿಶೇಷ ತನಿಖಾ ದಳವನ್ನು ಶೀಘ್ರವೇ ರಚಿಸಬೇಕು ಎಂದು ಆಗ್ರಹಿಸಿದರು.