ಜ.4ರಂದು ಅಯೋಧ್ಯೆ ಪ್ರಕರಣದ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್

ಹೊಸದಿಲ್ಲಿ,ಡಿ.24: ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಜ.4ರಂದು ಕೈಗೆತ್ತಿಕೊಳ್ಳಲಿದೆ.
ಮು.ನ್ಯಾ.ರಂಜನ ಗೊಗೊಯಿ ಮತ್ತು ನ್ಯಾ.ಎಸ್.ಕೆ.ಕೌಲ್ ಪೀಠದೆದುರು ಈ ವಿಷಯ ಬರಲಿದೆ. ನಾಲ್ಕು ಸಿವಿಲ್ ಮೊಕದ್ದಮೆಗಳಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಒಟ್ಟು 14 ಮೇಲ್ಮನವಿಗಳನ್ನು ಸಲ್ಲಿಸಲಾಗಿದ್ದು,ಇವುಗಳ ವಿಚಾರಣೆಗಾಗಿ ಮು.ನ್ಯಾ.ಗೊಗೊಯಿ ನೇತೃತ್ವದ ಪೀಠವು ಮೂವರು ನ್ಯಾಯಾಧೀಶರ ಪೀಠವನ್ನು ರಚಿಸುವ ಸಾಧ್ಯತೆಯಿದೆ. ಅಯೋಧ್ಯೆಯ 2.77 ಎಕರೆ ವಿವಾದಿತ ತಾಣವನ್ನು ಕಕ್ಷಿದಾರರಾದ ಸುನ್ನಿ ವಕ್ಫ್ ಮಂಡಳಿ,ನಿರ್ಮೋಹಿ ಅಖಾಡಾ ಮತ್ತು ರಾಮ ಲಲ್ಲಾ ಅವರ ನಡುವೆ ಸಮಾನವಾಗಿ ಹಂಚಿಕೆ ಮಾಡಿ ಅಲಹಾಬಾದ್ ಉಚ್ಚ ನ್ಯಾಯಾಲಯವು ತೀರ್ಪು ನೀಡಿತ್ತು.
ದೈನಂದಿನ ವಿಚಾರಣೆಗೆ ಬಿಜೆಪಿ ಒಲವು
ಶೀಘ್ರ ತೀರ್ಪು ನೀಡಲು ಸರ್ವೋಚ್ಚ ನ್ಯಾಯಾಲಯವು ಅಯೋಧ್ಯೆ ವಿವಾದ ಪ್ರಕರಣದ ದೈನಂದಿನ ವಿಚಾರಣೆ ನಡೆಸಬೇಕು ಎನ್ನುವುದು ಬಿಜೆಪಿಯ ಅಭಿಪ್ರಾಯವಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಅವರು ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ನ್ಯಾಯಾಲಯದ ತೀರ್ಪಿಗೆ ಕಾಯದೇ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕಾಗಿ 2019ರ ಲೋಕಸಭಾ ಚುನಾವಣೆಗಳಿಗೆ ಮುನ್ನ ಕಾನೂನನ್ನು ತರುವಂತೆೆ ಹಿಂದುತ್ವ ಗುಂಪುಗಳು ಸರಕಾರದ ಮೇಲೆ ಒತ್ತಡ ಹೇರುತ್ತಿವೆ. ಈ ಬಗ್ಗೆ ತನ್ನ ನಿಲುವನ್ನು ಬಿಜೆಪಿ ಇನ್ನೂ ಸ್ಪಷ್ಟಪಡಿಸಿಲ್ಲ.







