ನಾಲ್ಕು ವರ್ಷಗಳ ಹಿಂದಿನ ಹತ್ಯೆ ಪ್ರಕರಣ: ಮಾಜಿ ಕಾರ್ಪೊರೇಟರ್ ಪುತ್ರನ ಮೇಲಿನ ಆರೋಪ ಸಾಬೀತು
ಡಿ.26 ಕ್ಕೆ ಶಿಕ್ಷೆಯ ಪ್ರಮಾಣ ಪ್ರಕಟ

ಮಂಗಳೂರು, ಡಿ.24: ಹಳೆ ವೈಷಮ್ಯದ ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಹಾಡಹಗಲೇ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆಗೈದ ಮಾಜಿ ಕಾರ್ಪೊರೇಟರ್ ಪುತ್ರನ ಮೇಲಿನ ಆರೋಪ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಡಿ.26ಕ್ಕೆ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ. ಪ್ರಕರಣದ ಇತರ ಐವರು ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಅಶೋಕನಗರ ಹೊಯ್ಗೆಬೈಲ್ ನಿವಾಸಿ, ಮಾಜಿ ಕಾರ್ಪೊರೇಟರ್ ಬಿ.ಕಮಲಾಕ್ಷ ಅವರ ಪುತ್ರ ಆಶ್ರಿತ್ ಯಾನೆ ಆಶು (23) ಆರೋಪಿ. ಅದೇ ಪ್ರದೇಶದ ಸಂಜಯ ಯಾನೆ ವರುಣ್ (19) ಹತ್ಯೆಗೀಡಾದ ವ್ಯಕ್ತಿ. ಘಟನೆ ನಡೆದು ನಾಲ್ಕು ವರ್ಷಗಳಾಗಿದ್ದು, ಆರೋಪಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ. ಇತ್ತೀಚೆಗೆ ಮತ್ತೆ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಘಟನೆ ವಿವರ: 2014ರ ಮೇ 22ರಂದು ಮಧ್ಯಾಹ್ನ 2 ಗಂಟೆಗೆ ಸಂಜಯ ತನ್ನ ಹುಟ್ಟುಹಬ್ಬ ಆಚರಿಸಲು ಗೆಳೆಯನೊಂದಿಗೆ ಮಹೇಶ ಎಂಬ ಮತ್ತೊಬ್ಬ ಸ್ನೇಹಿತನನ್ನು ಕರೆಯಲು ಆತನ ಮನೆ ಕಡೆಗೆ ತೆರಳುತ್ತಿದ್ದರು. ದಾರಿಮಧ್ಯೆ ಹೊಯ್ಗೆಬೈಲ್‌ನ ಮಾಡರ್ನ್ ರೈಸ್ ಮಿಲ್ ಬಳಿ ಆರೋಪಿ ಆಶ್ರಿತ್ ಎದುರಾಗಿದ್ದ. ಹಳೆಯ ಸಣ್ಣ ವೈಷಮ್ಯ ಇವರಿಬ್ಬರ ನಡುವೆ ಇದ್ದುದರಿಂದ ಮಾತಿನ ಚಕಮಕಿ ಬೆಳೆದಿತ್ತು. ಕೂಡಲೆ ಆಶ್ರಿತ್ ತನ್ನ ಸ್ನೇಹಿತರನ್ನು ಸ್ಥಳಕ್ಕೆ ಕರೆಸಿದ. ಈ ಸಂದರ್ಭ ತಪ್ಪಿಸಿಕೊಂಡು ಓಡಲು ಸಂಜಯ ಯತ್ನಿಸಿದರೂ ಬಿಡದ ಆಶ್ರಿತ್, ಚೂರಿಯಿಂದ 9 ಕಡೆ ಬರ್ಬರವಾಗಿ ಇರಿದು ಸಂಜಯನನ್ನು ಹತ್ಯೆಗೈದಿದ್ದ. ಹಾಡಹಗಲೇ ನಡೆದ ಈ ಘಟನೆಯಿಂದ ಸ್ಥಳೀಯರು ತೀವ್ರ ಆತಂಕಕ್ಕೊಳಗಾಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಸಂಜಯನನ್ನು ಅಪರಾಧಿ ಎಂದು ತೀರ್ಪು ನೀಡಿದೆ. ಸರಕಾರಿ ಅಭಿಯೋಜಕ ರಾಜು ಪೂಜಾರಿ ಬನ್ನಾಡಿ ವಾದ ಮಂಡಿಸಿದ್ದರು.
ತಂದೆ ಬಳಿ ದೂರು ಹೇಳಿದ್ದಕ್ಕೆ ಕೊಂದ!
ಕೊಲೆ ಘಟನೆ ನಡೆಯುವ ಕೆಲ ಸಮಯ ಹಿಂದೆ ಸಂಜಯನ ಇಬ್ಬರು ಸ್ನೇಹಿತರು ಬೋಳೂರಿನಲ್ಲಿ ಕೋಲಕ್ಕೆ ತೆರಳಿ ಬಳಿಕ ಹೊಟೇಲ್‌ಗೆ ಹೋಗುತ್ತಿದ್ದಾಗ ಆಶ್ರಿತ್‌ನ ಸ್ನೇಹಿತರೊಂದಿಗೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದಿತ್ತು. ಈ ಸಂದರ್ಭ ಸಂಜಯನ ಸ್ನೇಹಿತ ಚಿನ್ನು ಎಂಬಾತನ ಮುಖಕ್ಕೆ ಆಶ್ರಿತ್ ಸ್ನೇಹಿತರು ಸಿಗರೆಟ್‌ನಿಂದ ಸುಟ್ಟಿದ್ದರು. ಈ ಘಟನೆ ನಡೆದಾಗ ಸಂಜಯ ಇರಲಿಲ್ಲ. ಆದರೆ ಮರುದಿನ ಆಶ್ರಿತ್‌ನ ಮನೆಗೆ ಹೋದ ಸಂಜಯ, ತನ್ನ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದನ್ನು ಆಶ್ರಿತ್ ತಂದೆ ಕಮಲಾಕ್ಷರ ಬಳಿ ದೂರಿದ್ದ. ಆಗ ತನ್ನ ತಂದೆ ಎದುರೇ ‘ನಿನ್ನನ್ನು ಕೊಲ್ಲದೆ ಬಿಡಲ್ಲ’ ಎಂದು ಆಶ್ರಿತ್ ಬೆದರಿಕೆ ಹಾಕಿದ್ದ! ಇದೇ ವೈಷಮ್ಯ ಮುಂದುವರಿಸಿದ್ದ ಆಶ್ರಿತ್, ಸಂಜಯನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಎನ್ನಲಾಗಿದೆ.