ಅನಿರ್ಧಿಷ್ಠಾವಧಿ ಉಪವಾಸ ಆರಂಭಿಸಿದ ಗಂಟೆಯಲ್ಲಿಯೇ ಸಿಕ್ಕಿದ ಭರವಸೆ: ಸತ್ಯಾಗ್ರಹ ಹಿಂದೆಗೆತ

ಮಂಗಳೂರು,ಡಿ.24: ಆರೋಗ್ಯ ಇಲಾಖೆಯಲ್ಲಿನ ಕೆಲಸವನ್ನು ಖಾಯಂ ಮಾಡಬೇಕೆಂದು ಆಗ್ರಹಿಸಿ ಆರೋಗ್ಯ ಇಲಾಖೆಯ ನೌಕರರೊಬ್ಬರು ದ.ಕ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಅನಿರ್ಧಿಷ್ಠಾವಧಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ ಒಂದು ಗಂಟೆಯಲ್ಲಿಯೆ ಅವರಿಗೆ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ಉಪವಾಸ ಸತ್ಯಾಗ್ರಹವನ್ನು ವಾಪಾಸು ತೆಗೆದುಕೊಂಡಿದ್ದಾರೆ.
ಸುಳ್ಯ ಸರಕಾರಿ ಆಸ್ಪತ್ರೆಯ ಅಡುಗೆಯವರಾದ ಹೆಚ್.ವೆಂಕಟ್ ರಮಣ ಅವರು ಇಂದು ತಮ್ಮ ಕುಟುಂಬ ಸಮೇತ ದ.ಕ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಅನಿರ್ಧಿಷ್ಠಾವಧಿ ಮುಷ್ಕರ ಆರಂಭಿಸಿದ್ದರು. 1988 ಮಾರ್ಚ್ 21 ರಿಂದ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಹೆಚ್ ವೆಂಕಟ್ ರಮಣ ಅವರು ತಮ್ಮ ಕೆಲಸವನ್ನು ಖಾಯಂ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ಮಾಡಿ ನಾಲ್ಕೂವರೆ ವರ್ಷ ಕಳೆದರೂ ಅದನ್ನು ಪಾಲಿಸದಿರುವ ಹಿನ್ನೆಲೆಯಲ್ಲಿ, ಅದಕ್ಕೆ ಮನವಿ ಮಾಡಿದರೂ ಅದು ಈಡೇರದಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ಆರಂಭಿಸಿದ್ದರು.
ಬೆಳಿಗ್ಗೆ ಹತ್ತು ಗಂಟೆಗೆ ಪ್ರತಿಭಟನೆ ಆರಂಭವಾದೊಡನೆ ಜೆಡಿಎಸ್ ಜಿಲ್ಲಾ ಮುಖಂಡ ಎಂ.ಬಿ ಸದಾಶಿವ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತುಕತೆ ನಡೆಸಿ ಜಿಲ್ಲಾ ಆರೋಗ್ಯಾಧಿಕಾರಿಗಳ ಜೊತೆ ಸತ್ಯಾಗ್ರಹ ನಡೆಯುತ್ತಿರುವಲ್ಲಿ ಬಂದು ಮಾತುಕತೆ ನಡೆಸಿದರು. ಎಂ.ಬಿ ಸದಾಶಿವ ಅವರು ಜಿಲ್ಲಾ ಆರೋಗ್ಯಾಧಿಕಾರಿಗಳ ಜೊತೆ ಚರ್ಚಿಸಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ಕಾತ್ಯಾಯಿನಿ ಅವರೊಂದಿಗೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿ ಇದೇ ತಿಂಗಳ ಅಂತ್ಯದೊಳಗೆ ಸಮಸ್ಯೆ ಬಗೆಹರಿಸುವಂತೆ ಮಾತಕತೆ ನಡೆಸಿದರು. ಎಂ.ಬಿ ಸದಾಶಿವ ಅವರು ಮಧ್ಯಸ್ಥಿಕೆ ನಡೆಸಿ ವೆಂಕಟ್ ರಮಣ ಉಪವಾಸ ಸತ್ಯಾಗ್ರಹ ಮಾಡದಂತೆ ಮನವೊಲಿಸಿದ ಹಿನ್ನೆಲೆಯಲ್ಲಿ ವೆಂಕಟ್ ರಮಣ ಅವರು ಉಪವಾಸ ಸತ್ಯಾಗ್ರಹವನ್ನು ವಾಪಾಸು ಪಡೆದಿದ್ದಾರೆ.