ಸೆಂಟ್ರಲ್ ಕಮಿಟಿಯ ಸ್ವರ್ಣ ಮಹೋತ್ಸವದ ಮುಖ್ಯ ಅತಿಥಿಯಾಗಿ ಪ್ರಮೋದ್ ಮಧ್ವರಾಜ್
ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಟಿಪ್ಪುಸುಲ್ತಾನ್ ಅಭಿಮಾನಿ ಮಹಾ ವೇದಿಕೆ ಎಚ್ಚರಿಕೆ

ಪ್ರಮೋದ್ ಮಧ್ವರಾಜ್
ಮಂಗಳೂರು, ಡಿ.24: ದ.ಕ. ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯು ತನ್ನ 50ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಡಿ.29ರಂದು ನಗರದ ಪುರಭವನದಲ್ಲಿ ಹಮ್ಮಿಕೊಂಡಿರುವ ‘ಸ್ವರ್ಣ ಮಹೋತ್ಸವ’ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ರ ಹೆಸರು ನಮೂದಿಸಿರುವ ಬಗ್ಗೆ ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿ ಮಹಾ ವೇದಿಕೆ (ರಿ) ದ.ಕ. ಜಿಲ್ಲಾ ಸಮಿತಿಯು ಖಂಡಿಸಿದೆ.
ವೇದಿಕೆಯ ಅಧ್ಯಕ್ಷ ಎಚ್.ಇಸ್ಮಾಯೀಲ್ ಶಾಫಿ ಬಬ್ಬುಕಟ್ಟೆ ಹೇಳಿಕೆಯೊಂದನ್ನು ನೀಡಿ ಇತ್ತೀಚೆಗೆ ಉಡುಪಿ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತನ್ನ ರಾಜಕೀಯ ತುಷ್ಠೀಕರಣಕ್ಕೆ ದೇಶ ಕಂಡ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಹಝ್ರತ್ ಶಹೀದ್ ಟಿಪ್ಪುಸುಲ್ತಾನ್ ಅವರ ತೇಜೋವಧೆ ಮಾಡಿದ್ದಾರೆ. ತನ್ನ ರಾಜಕೀಯ ಲಾಭಕ್ಕಾಗಿ ಟಿಪ್ಪುವಿಗೆ ಅಗೌರವದ ಮಾತುಗಳನ್ನಾಡಿದ ಜಾತ್ಯತೀತದ ಮುಖವಾಡ ಹೊತ್ತುಕೊಂಡ ಪ್ರಮೋದ್ ಮಧ್ವರಾಜ್ರು ಈ ಕಾರ್ಯಕ್ರಮಕ್ಕೆ ಯಾವುದೇ ಕಾರಣಕ್ಕೂ ಹಾಜರಾಗಲು ಬಿಡಲಾರೆವು ಮತ್ತು ಈ ಕೂಡಲೇ ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರನ್ನು ಕಾರ್ಯಕ್ರಮದ ಸಂಘಟಕರು ಕೈ ಬಿಡಬೇಕು ಎಂದು ಒತ್ತಾಯಿಸಿದ್ದಾರೆ.
ಒಂದು ವೇಳೆ ಪ್ರಮೋದ್ ಮಧ್ವರಾಜ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ದ.ಕ. ಜಿಲ್ಲಾ ಸಮಿತಿಯ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಟಿಪ್ಪುಸುಲ್ತಾನ್ ಅಭಿಮಾನಿಗಳು ಪುರಭವನದ ಮುಂದೆ ಕಪ್ಪುಬಾವುಟವನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸುವುದಾಗಿ ಇಸ್ಮಾಯೀಲ್ ಶಾಫಿ ಎಚ್ಚರಿಸಿದ್ದಾರೆ