ಮಂಗಳೂರಿನಲ್ಲಿ ಸಂಭ್ರಮದ ಕ್ರಿಸ್‌ಮಸ್ ಆಚರಣೆ

ಮಂಗಳೂರು,ಡಿ.24: ಏಸು ಕ್ರಿಸ್ತರ ಜನನದ ಹಬ್ಬವಾದ ‘ಕ್ರಿಸ್‌ಮಸ್’ನ ಮುಂಚಿನ ದಿನವಾದ ಸೋಮವಾರ ರಾತ್ರಿಯನ್ನು ಕ್ರೈಸ್ತರು ಕ್ರಿಸ್‌ಮಸ್ ಜಾಗರಣೆಯ ಮೂಲಕ ಸಂಭ್ರಮಿಸಿದರು. ನಗರ ಸಹಿತ ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಮತ್ತು ಬಲಿಪೂಜೆಗಳು ನಡೆದವು.
ವಿದ್ಯುತ್ ದೀಪಗಳಿಂದ ಅಲಂಕರಿಸಲಾದ ಚರ್ಚ್‌ಗಳ ಮತ್ತು ಕ್ರೈಸ್ತರ ಮನೆಯ ಆವರಣದಲ್ಲಿ ಆಕರ್ಷಕ ಕ್ರಿಬ್‌ಗಳನ್ನು (ಗೋದಲಿ) ನಿರ್ಮಿಸಲಾಗಿತ್ತು. ತಾರೆ (ನಕ್ಷತ್ರ)ಗಳನ್ನು ನೇತು ಹಾಕಲಾಗಿತ್ತು. ಕ್ರಿಸ್‌ಮಸ್ ಗೀತೆಗಳು (ಕ್ಯಾರೊಲ್ಸ್) ಆಚರಣೆಗೆ ವಿಶೆೀಷ ಕಳೆ ನೀಡಿತ್ತು. ಕ್ರಿಸ್‌ಮಸ್ ತಾತಾ ‘ಸಾಂತಾಕ್ಲಾಸ್’ ಆಗಮನ ವಿಶೇಷ ಆಕರ್ಷಣೆಯಾಗಿತ್ತು. ಚರ್ಚ್‌ಗಳಲ್ಲಿ ರಾತ್ರಿ ವೇಳೆ ಜರುಗಿದ ವಿಶೇಷ ಪ್ರಾರ್ಥನೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಕ್ರೈಸ್ತರು ಶ್ರದ್ಧೆ ಮತ್ತು ಭಕ್ತಿಯಿಂದ ಪಾಲ್ಗೊಂಡಿದ್ದರು. ಬಲಿ ಪೂಜೆಯ ಬಳಿಕ ಕ್ರೈಸ್ತಬಾಂಧವರು ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರಲ್ಲದೆ, ಕೇಕ್‌ಗಳನ್ನು ಹಂಚಿಕೊಂಡರು.
ಮಂಗಳೂರಿನ ರೊಝಾರಿಯೊ ಕೆಥೆಡ್ರಲ್‌ನಲ್ಲಿ ನಡೆದ ಸಂಭ್ರಮದ ಬಲಿ ಪೂಜೆಯಲ್ಲಿ ಧರ್ಮಪ್ರಾಂತದ ಬಿಷಪ್ ಅ.ವಂ. ಡಾ. ಪೀಟರ್ ಪಾವ್ಲ್ ಸಲ್ದಾನ ಸಂದೇಶ ನೀಡಿದರು. ಬಲ್ಮಠದಲ್ಲಿರುವ ಚರ್ಚ್ ಆಫ್ ಸೌತ್ ಇಂಡಿಯಾ (ಸಿಎಸ್‌ಐ)ದ ಮಹಾ ದೇವಾಲಯ ಸಹಿತ ಇತರ ಸಿಎಸ್‌ಐ ದೇವಾಲಯಗಳಲ್ಲಿಯೂ ವಿಶೇಷ ಬಲಿ ಪೂಜೆಗಳು ನಡೆದವು.
ಕ್ರಿಸ್‌ಮಸ್ ಆಚರಣೆಯ ಹಿನ್ನೆಲೆಯಲ್ಲಿ ನಗರದ ಪ್ರಮುಖ ವ್ಯಾಪಾರ ಮಳಿಗೆಗಳು ಮತ್ತು ಹೊಟೇಲ್‌ಗಳು ಕೂಡಾ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ. ರವಿವಾರದಿಂದಲೇ ವ್ಯಾಪಾರ ಮಳಿಗೆಗಳಲ್ಲಿ ಮತ್ತು ಬೇಕರಿಗಳಲ್ಲಿ ಕ್ರಿಸ್‌ಮಸ್ ಆಚರಣೆಯ ಸಾಮಗ್ರಿಗಳ ಮತ್ತು ಸಿಹಿ ತಿಂಡಿಳ ಖರೀದಿ ಭರಾಟೆಯಿಂದ ನಡೆದಿತ್ತು.
ಮಂಗಳವಾರ ಕ್ರಿಸ್‌ಮಸ್ ಹಬ್ಬದ ಸಾಂಪ್ರದಾಯಿಕ ಆಚರಣೆ ನಡೆಯಲಿದ್ದು, ಚರ್ಚ್‌ಗಳಲ್ಲಿ ಹಬ್ಬದ ಬಲಿ ಪೂಜೆ, ಶುಭಾಶಯಗಳ ವಿನಿಮಯವಾಗಲಿದೆ. ಕ್ರಿಸ್‌ಮಸ್ ವಿಶೇಷ ತಿಂಡಿ ಕುಸ್ವಾರ್ ವಿನಿಮಯ ಮತ್ತು ವಿತರಣೆಯೂ ನೇರವೇರಲಿದೆ. ಮನೆಗಳಲ್ಲಿ ಹಬ್ಬದ ವಿಶೇಷ ಭೋಜನ ವ್ಯವಸ್ಥೆ ನಡೆಯಲಿದೆ.
ಕ್ರೈಸ್ತರ ಪ್ರಮುಖ ಹಬ್ಬ
ಏಸು ಕ್ರಿಸ್ತರ ಜನ್ಮದಿನವು ಕ್ರೈಸ್ತರು ಆಚರಿಸುವ ಹಬ್ಬಗಳಲ್ಲಿ ಪ್ರಮುಖವಾಗಿದ್ದು, ಜಗತ್ತಿನಾದ್ಯಂತದ ಕ್ರೈಸ್ತರು ಡಿಸೆಂಬರ್ 25ರಂದು ಶ್ರದ್ಧೆ ಮತ್ತು ಭಕ್ತಿಯೊಂದಿಗೆ ಅದ್ದೂರಿಯಾಗಿ ಆಚರಿಸುತ್ತಾರೆ. ಈ ಹಬ್ಬದ ದಿನ ಹತ್ತಿರವಾಗುತ್ತಲೇ ಎಲ್ಲೆಲ್ಲೂ ಸಡಗರ ಸಂಭ್ರಮದ ವಾತಾವರಣ ಕಂಡು ಬರುತ್ತದೆ. ಹೊಸ ಉಡುಗೆ ತೊಡುಗೆಗಳ ಖರೀದಿಯ ಭರಾಟೆ, ಕ್ರಿಸ್‌ಮಸ್ ಕೇಕ್ ಮತ್ತಿತರ ವಿಶೇಷ ತಿಂಡಿಗಳ (ಕುಸ್ವಾರ್) ತಯಾರಿ, ಗೋದಲಿ ನಿರ್ಮಾಣ, ಕ್ರಿಸ್‌ಮಸ್ ಟ್ರೀ, ಸಾಂತಾಕ್ಲೊಸ್ ಇತ್ಯಾದಿ ಈ ಹಬ್ಬದ ಸಂಭ್ರಮಗಳ ಸಂಕೇತವಾಗಿದೆ.
ಈ ಮಧ್ಯೆ ಕ್ರೈಸ್ತ ಧರ್ಮಸಭೆಯು ಏಸುಕ್ರಿಸ್ತರ ಜನ್ಮ ದಿನದ ಹಬ್ಬ ಆಚರಣೆಗೆ 4 ವಾರಗಳ ಅಧ್ಯಾತ್ಮಿಕ ಸಿದ್ಧತೆಯನ್ನು ಮಾಡಿಕೊಳ್ಳುತ್ತಿವೆ. ಈ ವೇಳೆ ಕ್ರೈಸ್ತರು ಏಸು ಕ್ರಿಸ್ತರ ಆಗಮನವನ್ನು ನಿರೀಕ್ಷಿಸುತ್ತಾ ಅದಕ್ಕಾಗಿ ಪ್ರಾರ್ಥನೆ, ಧ್ಯಾನಮಾಡಿ ಏಕಚಿತ್ತದಿಂದ ಸಿದ್ಧತೆಯನ್ನು ಮಾಡಿಕೊಳ್ಳುತ್ತಾರೆ.
ಸಾಂತಾಕ್ಲೊಸ್
ಕ್ರಿಸ್‌ಮಸ್ ಸಂಭ್ರಮಕ್ಕೆ ಹಲವು ಆಚರಣೆಗಳು ಹೊಸ ಹುರುಪು ನೀಡಲಿವೆ. ಅಂದರೆ ಗೋದಲಿಯ ಜತೆಗೆ ಕ್ರಿಸ್‌ಮಸ್ ಶುಭಾಶಯ ವಿನಿಮಯ ಮಾಡಿಕೊಳ್ಳಲು ಕ್ರಿಸ್‌ಮಸ್ ಗ್ರೀಟಿಂಗ್ ಕಾರ್ಡುಗಳು, ಸಂತಸವನ್ನು ಹಂಚಿಕೊಳ್ಳಲು ಕ್ರಿಸ್‌ಮಸ್ ವಿಶೇಷ ತಿಂಡಿ ತಿನಿಸುಗಳಾದ ಕುಸ್ವಾರ್ ಹಂಚುವಿಕೆ, ಮಿನುಗುವ ನಕ್ಷತ್ರಗಳ ಸಾಲು, ಕ್ರಿಸ್‌ಮಸ್ ಟ್ರೀ ಹಾಗೂ ಪುಟಾಣಿಗಳನ್ನು ಮನರಂಜಿಸುವ ‘ಸಾಂತಾಕ್ಲೊಸ್’ ಗಮನ ಸೆಳೆಯುತ್ತವೆ.
ಆಚರಣೆ
ಏಸು ಕ್ರಿಸ್ತರು ಡಿಸೆಂಬರ್ 25ರಂದು ಜನಿಸಿದರು ಎಂಬ ನಂಬಿಕೆಯೊಂದಿಗೆ ಮುನ್ನಾದಿನವಾದ ಅಂದರೆ ಡಿಸೆಂಬರ್ 24ರಂದು ರಾತ್ರಿ ಚರ್ಚ್‌ಗಳಲ್ಲಿ ವಿಶೇಷ ಸಂಭ್ರಮದ ಬಲಿ ಪೂಜೆ ನಡೆಯುತ್ತದೆ. ಬಳಿಕ ಹಬ್ಬದ ಪ್ರಯುಕ್ತ ವಿವಿಧ ಕಾರ್ಯಕ್ರಮ ಜರುಗಲಿವೆ.