ತೆಲಂಗಾಣ: ಒವೈಸಿ ಪಕ್ಷಕ್ಕಿಂತ ನಮ್ಮ ಸಾಧನೆ ಉತ್ತಮ ಎಂದ ಅಮಿತ್ ಮಾಳವಿಯಗೆ ಮುಖಭಂಗ
"ಸರಿಯಾಗಿ ಹೋಂ ವರ್ಕ್ ಮಾಡಿ" ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥನ ಕಾಲೆಳೆದ ಟ್ವಿಟರಿಗರು

ಇತ್ತೀಚೆಗೆ ತೆಲಂಗಾಣದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿ ಭಾರೀ ಹಿನ್ನಡೆ ಅನುಭವಿಸಿದ್ದ ಬಿಜೆಪಿಯ ಸಾಧನೆಯನ್ನು ಸಮರ್ಥಿಸಲು ಹೋಗಿ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ಮುಖಭಂಗಕ್ಕೊಳಗಾಗಿದ್ದಾರೆ.
ಬಿಜೆಪಿಯು ತೆಲಂಗಾಣದಲ್ಲಿ ಒಂದು ಕ್ಷೇತ್ರದಲ್ಲಿ ಜಯ ಗಳಿಸಿದ್ದರೂ ಶೇ.7ರಷ್ಟು ಮತ ಗಳಿಸಿದೆ. ಆದರೆ ಅಸಾದುದ್ದೀನ್ ಒವೈಸಿಯವರ ಎಐಎಂಐಎಂ 7 ಕ್ಷೇತ್ರಗಳಲ್ಲಿ ಗೆದ್ದರೂ 2.7 ಶೇ. ಮತಗಳನ್ನು ಮಾತ್ರ ಗಳಿಸಿದೆ ಎಂದು ಅಮಿತ್ ಮಾಳವಿಯ ಹೇಳಿದ್ದರು.
“ತೆಲಂಗಾಣದಲ್ಲಿ ಎಐಎಂಐಎಂ ಕೇವಲ 2.7 ಶೇ. ಮತಗಳನ್ನು ಗಳಿಸಿ 7 ಸೀಟುಗಳನ್ನು ಗೆದ್ದಿದೆ. ಆದರೆ ಬಿಜೆಪಿ ಶೇ.7ರಷ್ಟು ಮತಗಳನ್ನು ಗಳಿಸಿದೆ” ಎಂದು ಅಮಿತ್ ಮಾಳವಿಯ ಟ್ವೀಟ್ ಮಾಡಿದ್ದರು.
ಆದರೆ ವಾಸ್ತವ ಏನೆಂದರೆ ಅಮಿತ್ ಮಾಳವಿಯ ಮಾಡಿರುವ ಟ್ವೀಟ್ ತಪ್ಪು ಹಾಗು ದಾರಿ ತಪ್ಪಿಸುವಂತಹದ್ದು. ಏಕೆಂದರೆ ಎಐಎಂಐಎಂ 2.7 ಶೇ. ಮತಗಳನ್ನು ಗಳಿಸಿದ್ದು, ಕೇವಲ 8 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಿ 7ರಲ್ಲಿ ಜಯ ಗಳಿಸಿತ್ತು. ಇನ್ನೊಂದೆಡೆ ಬಿಜೆಪಿ ರಾಜ್ಯದ 119 ಕ್ಷೇತ್ರಗಳಲ್ಲಿ 118ರಲ್ಲಿ ಸ್ಪರ್ಧಿಸಿತ್ತು. ಆದರೆ ಗೆದ್ದದ್ದು ಮಾತ್ರ 1 ಕ್ಷೇತ್ರದಲ್ಲಿ. ಅದೇ ರೀತಿ ಎಐಎಂಐಎಂನ ಸ್ಟ್ರೈಕ್ ರೇಟ್ 87.5 ಶೇ. ಆಗಿದ್ದರೆ, ಬಿಜೆಪಿಯದ್ದು ಕೇವಲ 0.85 ಶೇ.
ಮಾಳವಿಯರ ಈ ಟ್ವೀಟ್ ಗೆ ಟ್ವಿಟರಿಗರು ಸೂಕ್ತ ಪ್ರತಿಕ್ರಿಯೆ ನೀಡಿದ್ದು, ಅಂಕಿ ಅಂಶಗಳನ್ನು ಟ್ವೀಟ್ ಮಾಡಿ “ಸರಿಯಾಗಿ ಹೋಮ್ ವರ್ಕ್ ಮಾಡಿ” ಎಂದಿದ್ದಾರೆ.







