ವಿವಾಹ ಬ್ಯಾಡ್ಮಿಂಟನ್ ಸಾಧನೆಗೆ ಅಡ್ಡಿಯಾಗದು
ಸೈನಾ-ಕಶ್ಯಪ್ ದಂಪತಿ ವಿಶ್ವಾಸ

ಮುಂಬೈ, ಡಿ.24: ನಮ್ಮ ವಿವಾಹ ಬ್ಯಾಡ್ಮಿಂಟನ್‌ನಲ್ಲಿ ಇನ್ನಷ್ಟು ಸಾಧನೆ ಮಾಡಲು ಸಹಾಯವಾಗಲಿದೆ ಎಂದು ಇತ್ತೀಚೆಗೆ ವಿವಾಹ ಬಂಧನಕ್ಕೆ ಒಳಗಾದ ಭಾರತದ ಖ್ಯಾತ ಶಟ್ಲರ್ ಜೋಡಿ ಪಿ.ಕಶ್ಯಪ್ ಹಾಗೂ ಸೈನಾ ನೆಹ್ವಾಲ್ ಅಭಿಪ್ರಾಯಪಟ್ಟಿದೆ.
‘ಟೈಮ್ಸ್ ಆಫ್ ಇಂಡಿಯಾ’ದೊಂದಿಗೆ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.‘‘ನಾವಿಬ್ಬರೂ ಜೊತೆಯಾಗಿ ವರ್ಷಗಳ ಕಾಲ ಬ್ಯಾಡ್ಮಿಂಟನ್‌ನಲ್ಲಿ ಪಾಲ್ಗೊಂಡಿದ್ದೇವೆ ಹಾಗೂ ಪರಸ್ಪರ ಒಬ್ಬರನ್ನೊಬ್ಬರು ಅರ್ಥೈಸಿಕೊಂಡಿದ್ದೇವೆ. ಆದರೆ ಈಗ ನಾವು ದಂಪತಿಯಾಗಿದ್ದೇವೆ. ಇದು ತಮ್ಮ ಜೀವನದಲ್ಲಿ ಮಹತ್ವದ ಕ್ಷಣ’ ಎಂದು ಸೈನಾ ಹೇಳಿದ್ದಾರೆ.
ಮುಂದುವರಿದು ಮಾತನಾಡಿದ 2012ರ ಒಲಿಂಪಿಕ್ಸ್ ಕಂಚು ವಿಜೇತೆ, ‘‘ಬ್ಯಾಡ್ಮಿಂಟನ್‌ಗೆ ಸಂಬಂಧಿಸಿದಂತೆ ಇರುವ ನಮ್ಮ ವೈಯಕ್ತಿಕ ಸಮಸ್ಯೆಗಳ ಕುರಿತು ಆಪ್ತ ಸಮಾಲೋಚನೆ ನಡೆಸುತ್ತಿದ್ದೆವು. ಆದರೆ ಈಗಿನ ಹೊಸ ಸಂಬಂಧ ನಮ್ಮ ತಿಳುವಳಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ.ಇಬ್ಬರಿಗೂ ಇದೊಂದು ಅತ್ಯುತ್ತಮ ಕ್ಷಣ’’ ಎಂದಿದ್ದಾರೆ.
ಪಿ.ಕಶ್ಯಪ್ ಮಾತನಾಡಿ, ‘‘ಮದುವೆಯಾಗುವುದು ನಮ್ಮಿಬ್ಬರಿಗೂ ಸುಲಭದ ನಿರ್ಧಾರವಾಗಿತ್ತು. ಹಲವು ವರ್ಷಗಳಿಂದ ನಾವು ಪರಸ್ಪರ ಅರಿತುಕೊಂಡಿದ್ದೆವು. ನಮ್ಮ ತಿಳುವಳಿಕೆ ಉನ್ನತಮಟ್ಟದಾಗಿತ್ತು. ಇದು ಯಾವಾಗ ಪ್ರೀತಿಯಾಗಿ ಅರಳಿದ್ದು ಎಂದು ಗೊತ್ತೇ ಆಗಲಿಲ್ಲ’’ ಎಂದರು.







