ಮತ್ತೊಂದು ಮೆಲುಗಲ್ಲು ಸ್ಥಾಪಿಸುವ ಹಾದಿಯಲ್ಲಿ ಭಾರತ
ಬಾಕ್ಸಿಂಗ್ ಡೇ ಟೆಸ್ಟ್

►150ನೇ ಟೆಸ್ಟ್ ಗೆಲುವಿನತ್ತ ಚಿತ್ತ
ಮೆಲ್ಬೋರ್ನ್, ಡಿ.24: ಭಾರತ ಕ್ರಿಕೆಟ್ ತಂಡ ಮೆಲ್ಬೋರ್ನ್ ಟೆಸ್ಟ್ ಜಯಸಿದರೆ 150ನೇ ಟೆಸ್ಟ್ ಗೆಲುವಿನ ದಾಖಲೆಗೆ ಭಾಜನವಾಗಲಿದೆ. ಸದ್ಯ ಆಸ್ಟ್ರೇಲಿಯ(384), ಇಂಗ್ಲೆಂಡ್(364), ವೆಸ್ಟ್ ಇಂಡೀಸ್(171) ಮತ್ತು ದ.ಆಫ್ರಿಕ (161) ಈ ಸಾಧನೆಗೆ ಪಾತ್ರವಾದ ತಂಡಗಳಾಗಿವೆ.
ಬುಧವಾರ ಆರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತ ಜಯ ಸಾಧಿಸಿದರೆ ಈ ಮೈಲುಗಲ್ಲು ಸ್ಥಾಪಿಸಬಹುದಾಗಿದೆ. ಆದಾಗ್ಯೂ ಈ ಹಿಂದಿನ ದಾಖಲೆಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ವಿರಾಟ್ ಕೊಹ್ಲಿ ಬಳಗದ ಎದುರು ಕಠಿಣ ದಾರಿಯೇ ಕಾಣುತ್ತದೆ. ಏಕೆಂದರೆ 1981ರಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದ ಟೆಸ್ಟ್ ಪಂದ್ಯವನ್ನು ಭಾರತ ಜಯಿಸಿತ್ತು. ಆ ಬಳಿಕ 1985ರಿಂದ 2014ರವರೆಗೆ ಭಾರತೀಯರು ಐದು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದು, ಎರಡರಲ್ಲಿ ಡ್ರಾ ಸಾಧಿಸಲಷ್ಟೇ ಯಶಸ್ವಿಯಾಗಿದ್ದಾರೆ.
2010ರಲ್ಲಿ ಇಂಗ್ಲೆಂಡ್ ಎದುರು ಆಸ್ಟ್ರೇಲಿಯ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಸೋಲು ಕಂಡಿತ್ತು. ಆ ಮಹಾ ಸೋಲಿನ ಬಳಿಕ ಈ ಮೈದಾನದಲ್ಲಿ ಆತಿಥೇಯರು 5 ಬಾರಿ ಗೆದ್ದಿದ್ದು, ಎರಡರಲ್ಲಿ ಡ್ರಾ ಸಾಧಿಸಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯ ಈಗ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ 1-1ರ ಸಮಬಲ ಸಾಧಿಸಿವೆ.ಒಂದು ವೇಳೆ ಈ ಪಂದ್ಯವನ್ನು ಆಸ್ಟ್ರೇಲಿಯ ಜಯಿಸಿದರೆ ಇದು ಆ ತಂಡ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಧಿಸಿದ 1000ನೇ ಜಯವಾಗಲಿದೆ. ಈಗಾಗಲೇ ಎಲ್ಲ ವಿಭಾಗಗಳಲ್ಲಿ ಸೇರಿ ಆಸೀಸ್ 999 ಪಂದ್ಯಗಳಲ್ಲಿ ಜಯ ಸಾಧಿಸಿದೆ.







