ಅಧ್ಯಕ್ಷರಿಲ್ಲದೆ ನಡೆಯಲಿರುವ 12ನೇ ಐಪಿಎಲ್

ಹೊಸದಿಲ್ಲಿ, ಡಿ.24: ಈ ಬಾರಿ ನಡೆಯಲಿರುವ 12ನೇ ಋತುವಿನ ಇಂಡಿಯನ್ ಪ್ರೀಮಿಯರ್ ಲೀಗ್ ಹೊಸ ದಾಖಲೆಯೊಂದನ್ನು ಸೃಷ್ಟಿಸಲಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಟೂರ್ನಿಯು ಅಧ್ಯಕ್ಷ ಅಥವಾ ಆಯುಕ್ತರಿಲ್ಲದೆ ನಡೆಯಲಿದೆ. ಆದಾಗ್ಯೂ ಸರ್ವೊಚ್ಚ ನ್ಯಾಯಾಲಯದಿಂದ ನೇಮಿಸಲಾದ ಆಡಳಿತಗಾರರ ಸಮಿತಿ(ಸಿಒಎ)ಯು ಈ ಮೊದಲಿದ್ದ ಎಲ್ಲ ಸಮಿತಿಗಳನ್ನು ವಿಸರ್ಜಿಸಿದ ನಂತರ ಆಯ್ಕೆಗಾರರ ಸಮಿತಿ ಮತ್ತು ಕ್ರಿಕೆಟ್ ಸಲಹಾ ಸಮಿತಿ(ಸಚಿನ್ ತೆಂಡುಲ್ಕರ್, ಸೌರವ್ ಗಂಗುಲಿ ಹಾಗೂ ಲಕ್ಷ್ಮಣ್ ಒಳಗೊಂಡ )ಯನ್ನು ಹೊರತುಪಡಿಸಿ ಯಾವುದೇ ಆಡಳಿತ ಮಂಡಳಿಯೂ ಈಗ ಇಲ್ಲ.
ಈ ಕುರಿತು ಮಾಧ್ಯಮವೊಂದಕ್ಕೆ ದೃಢಪಡಿಸಿರುವ ಬಿಸಿಸಿಐ ಕಾರ್ಯಕಾರಿ ಮಂಡಳಿ ಅಧಿಕಾರಿಯೊಬ್ಬರು, ವಾಸ್ತವವಾಗಿ ಮುಂಬರುವ ಐಪಿಎಲ್ ಟೂರ್ನಿಗೆ ಯಾವುದೇ ಮುಖ್ಯಸ್ಥರು ಇಲ್ಲ. ವಾರ್ಷಿಕ ಸಾಮಾನ್ಯ ಸಭೆಯೊಂದನ್ನು ನಡೆಸಿದ ಬಳಿಕ ಐಪಿಎಲ್‌ಗೆ ಹೊಸ ಸಮಿತಿಯನ್ನು ರಚಿಸಲಾಗುವುದು ಎಂದು ಹೇಳಿದ್ದಾರೆ.
ಐಪಿಎಲ್‌ನ ಹೊಸ ಅಧ್ಯಕ್ಷರ ಆಯ್ಕೆಯಾಗಿ ಚುನಾವಣೆ ನಡೆಯಬೇಕಿದೆ. ಅಲ್ಲಿಯವರೆಗೆ ಐಪಿಎಲ್ ಕುರಿತ ವಿಚಾರಗಳನ್ನು ಸಿಒಎ, ಐಪಿಎಲ್ ಸಿಒಒ, ಸಿಇಒ ನೋಡಿಕೊಳ್ಳುತ್ತವೆ ಎಂದು ಅಧಿಕಾರಿ ತಿಳಿಸಿದರು.
ನಾವಿಕನಿಲ್ಲದೆ ದೋಣಿ ನಡೆಸುತ್ತಿರುವುದು ಅಪಾಯದ ಸಂಕೇತ ಎಂದು ಅವರು ಮಾರ್ಮಿಕವಾಗಿ ನುಡಿದರು.







