ಅಗ್ರ 50ರಲ್ಲಿ ಸ್ಥಾನ ಪಡೆಯುವುದೇ ಗುರಿ: ಪ್ರಜ್ಞೇಶ್ ಗುಣೇಶ್ವರನ್
ಚೆನ್ನೈ,ಡಿ.24: ಭಾರತದ ಅಗ್ರ ಶ್ರೇಯಾಂಕಿತ ಟೆನಿಸ್ ಸಿಂಗಲ್ಸ್ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ಸದ್ಯ ತನ್ನ ಗುರಿ ಅಗ್ರ ಐವತ್ತರಲ್ಲಿ ಸ್ಥಾನ ಪಡೆಯುವುದೇ ಆಗಿದೆ ಎಂದು ತಿಳಿಸಿದ್ದಾರೆ. ಎರಡು ಎಟಿಪಿ ಚಾಲೆಂಜರ್ ಪದವಿಗಳನ್ನು ಜಯಿಸಿರುವ 29ರ ಹರೆಯದ ಪ್ರಜ್ಞೇಶ್, 2018 ನನ್ನ ಪಾಲಿಗೆ ಅತ್ಯುತ್ತಮ ವರ್ಷ ವಾಗಿತ್ತು ಎಂದು ತಿಳಿಸಿದ್ದಾರೆ. ಹಲವು ಬಾರಿ ಗಾಯದ ಸಮಸ್ಯೆಗಳಿಂದ ಪಂದ್ಯಾಟಗಳಿಂದ ಹೊರಗುಳಿದರೂ ಮತ್ತೆ ಪುಟಿದೆದ್ದು ಪ್ರಸಕ್ತ ವರ್ಷದ ಕೊನೆಯಲ್ಲಿ ಎಟಿಪಿ ರ್ಯಾಂಕಿಂಗ್‌ನಲ್ಲಿ 107ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ನೂರರ ಒಳಗೆ ಬಂದರೆ ಮುಂದೆ ಅಗ್ರ ಐವತ್ತರಲ್ಲಿ ಸ್ಥಾನ ಪಡೆಯುವುದು ಸುಲಭವಾಗುತ್ತದೆ. ಆದರೆ ಸದ್ಯ ಎಲ್ಲ ಪಂದ್ಯಗಳಲ್ಲೂ ಅತ್ಯುತ್ತಮ ನಿರ್ವಹಣೆ ನೀಡುವತ್ತ ಚಿತ್ತ ಹರಿಸಿದ್ದೇನೆ ಎನ್ನುತ್ತಾರೆ ಪ್ರಜ್ಞೇಶ್. 2019ರಲ್ಲಿ ಟೂರ್ ಪಂದ್ಯಗಳಲ್ಲಿ ಭಾಗವಹಿಸುವ ಇರಾದೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಚೆನ್ನೈ ಮೂಲದ ಆಟಗಾರ, ಮೊದಲಿಗೆ ಕೆಲವೊಂದು ಚಾಲೆಂಜರ್ಸ್ ಪಂದ್ಯಗಳು ಮತ್ತು ಟೂರ್ ಪಂದ್ಯಗಳಲ್ಲಿ ಆಡುತ್ತೇನೆ. ನಂತರ ಆ ಪಂದ್ಯಗಳಲ್ಲಿ ನನ್ನ ನಿರ್ವಹಣೆಯ ಆಧಾರದಲ್ಲಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎನ್ನುತ್ತಾರೆ. ಫೆಬ್ರವರಿಯಲ್ಲಿ ಕೊಲ್ಕತಾದಲ್ಲಿ ನಡೆಯಲಿರುವ ಡೇವಿಸ್ ಕಪ್ ಅರ್ಹತಾ ಪಂದ್ಯದಲ್ಲಿ ಭಾರತ ಇಟಲಿಯನ್ನು ಎದುರಿಸಲಿದೆ. ಈ ಕುರಿತು ಮಾತನಾಡಿದ ಪ್ರಜ್ಞೇಶ್, ಇಟಲಿ ಒಂದು ಬಲಿಷ್ಠ ತಂಡವಾಗಿದ್ದು ಅದನ್ನು ಸೋಲಿಸುವುದು ಸುಲಭವಲ್ಲ. ಅಗ್ರ ನೂರರ ಒಳಗೆ ಅವರ ಆರು ಆಟಗಾರರಿದ್ದಾರೆ. ಆದರೆ ನಮ್ಮ ದೇಶದಲ್ಲಿ ಮತ್ತು ಹುಲ್ಲುಹಾಸಿನ ಮೇಲೆ ಆಡುತ್ತಿರುವುದರಿಂದ ನಾವು ಗೆಲ್ಲುವ ಅವಕಾಶ ಹೆಚ್ಚಿದೆ ಎಂದು ಅಭಿಪ್ರಾಯಿಸುತ್ತಾರೆ. ಒಮ್ಮೆ ಮೈದಾನಕ್ಕಿಳಿದರೆ ನಂ.1 ಅಥವಾ ನಂ.2 ಆಟಗಾರ ಎಂಬ ಹಣೆಪಟ್ಟಿ ಹೆಚ್ಚು ಪ್ರಮುಖವಾಗುವುದಿಲ್ಲ ಎನ್ನುತ್ತಾರೆ ಪ್ರಜ್ಞೇಶ್ ಗುಣೇಶ್ವರನ್.





