ಸಚಿವ ಸಂಪುಟಕ್ಕೆ 60 ಮಂದಿಯನ್ನು ಸೇರಿಸಲಾಗದು: ವೀರಪ್ಪ ಮೊಯ್ಲಿ

ಮಂಗಳೂರು, ಡಿ.24: ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ rಚನೆಯ ಸಂದರ್ಭ ಅಸಹನೆ, ಅಸಮಾಧಾನಗಳು ಸಹಜ. ರಾಜ್ಯದಲ್ಲಿ 60 ಮಂದಿಯನ್ನು ಸಚಿವರನ್ನಾಗಿಸಲು ಸಾಧ್ಯವಿಲ್ಲ. ಸಚಿವ ಸ್ಥಾನ ಸಿಗದವರು ಯಾವ ಕಾರಣಕ್ಕೂ ಸಹನೆ ಕಳಕೊಳ್ಳಬಾರದು. ಒಂದಲ್ಲೊಂದು ದಿನ ಅವಕಾಶ ಸಿಗಲಿದ್ದು, ಆವರೆಗೆ ಸಮಾಧಾನದಿಂದಿರಬೇಕು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಎಂ.ವೀರಪ್ಪಮೊಯ್ಲಿ ಅತೃಪ್ತ ಕಾಂಗ್ರೆಸ್ ಶಾಸಕರಿಗೆ ಕಿವಿಮಾತು ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಲೇಡಿಗೋಶನ್ ಆಸ್ಪತ್ರೆಯ ನೂತನ ಕಟ್ಟಡವನ್ನು ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಈಗ ಎಲ್ಲಾ ಗೊಂದಲಗಳು ನಿವಾರಣೆಯಾಗಿವೆ.ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಪತನಗೊಳ್ಳಲಿದೆ ಎಂದು ಆಶಿಸಿದ ಬಿಜೆಪಿಗೆ ನಿರಾಶೆಯಾಗಿದೆ. ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ಇಲ್ಲ ಎಂಬ ಅಸಮಾಧಾನವನ್ನು ಕೂಡಾ ಸರಿಪಡಿಸಲಾಗಿದೆ ಎಂದ ಮೊಯ್ಲಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಾನು ಚಿಕ್ಕಬಳ್ಳಾಪುರದಲ್ಲೇ ಸ್ಪರ್ಧಿಸುತ್ತೇನೆ. ಮಂಗಳೂರಿನಿಂದ ಸ್ಪರ್ಧಿಸಲು ನಾನು ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಹಾಮೈತ್ರಿಕೂಟ ಅಧಿಕಾರಕ್ಕೆ ಬರಲಿದ್ದು, 200 ಸ್ಥಾನಗಳನ್ನು ಕಾಂಗ್ರೆಸ್ ಜಯಿಸಲಿದೆ. ಅಲ್ಲದೆ ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಆಯ್ಕೆಯಾಗಲಿದ್ದಾರೆ. ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಯ ಬಲ ಕ್ಷೀಣಿಸಿದೆ. ಈ ಮಧ್ಯೆ ಶಿವಸೇನೆ ಮತ್ತು ಕುಶ್ವಾಹ ಅವರ ಪಕ್ಷವು ಎನ್‌ಡಿಎ ತೊರೆದಿವೆ. ಕಾಂಗ್ರೆಸ್ ಸಹಿತ ವಿಪಕ್ಷಗಳು ಧ್ರುವಿಕರಣಗೊಂಡು ಬಲಯುತವಾಗುತ್ತಿವೆ. ಅದರ ಫಲವಾಗಿ ರಾಹುಲ್ ಗಾಂಧಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟವು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಬಿಜೆಪಿಗೆ 3 ಅಥವಾ 4 ಸ್ಥಾನ ಸಿಕ್ಕಿದರೆ ಅದೇ ಹೆಚ್ಚು. ನರೇಂದ್ರ ಮೋದಿಯ ಆಡಳಿತದಿಂದ ಜನರು ಭ್ರಮನಿರಸಗೊಂಡಿದ್ದು, ಅವರು ಅಧಿಕಾರದಿಂದ ಕೆಳಗಿಳಿಯುವುದು ನಿಶ್ಚಿತ ಎಂದು ಮೊಯ್ಲಿ ಹೇಳಿದರು.
ರಾಹುಲ್ ಗಾಂಧಿ ಪ್ರಧಾನಿ ಹುದ್ದೆಗೇರುವುದನ್ನು ಮೈತ್ರಿಕೂಟ ಒಪ್ಪುತ್ತದೆ. ಆದರೆ ಈಗಲೇ ಪ್ರಧಾನಿ ಅಭ್ಯರ್ಥಿಯನ್ನು ಘೋಷಣೆ ಮಾಡುವುದಿಲ್ಲ. ಚುನಾವಣೆ ಆಗಲಿ. ಮೈತ್ರಿಕೂಟದಲ್ಲಿ ಕಾಂಗ್ರೆಸ್ 200 ಸ್ಥಾನ ಜಯಿಸಿದರೆ ರಾಹುಲ್ ಗಾಂಧಿ ಮೈತ್ರಿಕೂಟದ ಮುಖಂಡರಾಗುತ್ತಾರೆ. ಅತ್ಯಧಿಕ ಸ್ಥಾನ ಗಳಿಸಿದವರು ಪ್ರಧಾನಿ ಆಗುತ್ತಾರೆ ಎಂದು ಮೊಯ್ಲಿ ವಿವರಿಸಿದರು.