ಕ್ರಿಸ್ಮಸ್: ಮಂಗಳೂರು ಬಿಷಪ್‌ರಿಂದ ಭಜನಾ ಮಂದಿರಕ್ಕೆ ಸೌಹಾರ್ದ ಭೇಟಿ

ಉಳ್ಳಾಲ, ಡಿ.25: ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಮಂಗಳೂರು ಬಿಷಪ್ ಫಾ.ಪೀಟರ್ ಪೌಲ್ ಸಲ್ದಾನ ಮಂಗಳವಾರ ತೊಕ್ಕೊಟ್ಟಿನ ಶ್ರೀ ವಿಠೋಭ ರುಕ್ಮಯಿ ಭಜನಾ ಮಂದಿರಕ್ಕೆ ಸೌಹಾರ್ದ ಭೇಟಿ ನೀಡಿದರು.
ಸಚಿವ ಯು.ಟಿ.ಖಾದರ್ ನೇತೃತ್ವದಲ್ಲಿ ನೀಡಿದ ಈ ಭೇಟಿಯಲ್ಲಿ ತೊಕ್ಕೊಟ್ಟಿನ ಸಂತ ಸೆಬೆಸ್ಟಿಯನ್ ಚರ್ಚ್ ಧರ್ಮಗುರು ಪಾ.ಜೆಬಿ ಸಲ್ದಾನ ಹಾಗೂ ಆಡಳಿತ ಮಂಡಳಿ ಸದಸ್ಯರು ಜೊತೆಗಿದ್ದರು. ಭಜನಾ ಮಂದಿರದಲ್ಲಿ ನಡೆಯುತ್ತಿದ್ದ ಭಜನಾ ಮಂಡಳಿಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡರು. ಈ ಸಂದರ್ಭ ಬಿಷಪ್ ಕ್ರಿಸ್ಮಸ್ ಸಿಹಿತಿಂಡಿಗಳನ್ನು ಹಂಚಿದರು.
ಇದೇವೇಳೆ ಮಾತನಾಡಿದ ಮಂಗಳೂರು ಬಿಷಪ್, ಕ್ರಿಸ್ಮಸ್ ಹಬ್ಬದ ಮತ್ತು ಮಂದಿರದ ವಾರ್ಷಿಕೋತ್ಸವ ಆಚರಣೆ ಮೂಲಕ ಎಲ್ಲರಿಗೂ ದೇವರ ಆಶೀರ್ವಾದ ದೊರೆಯಲಿ. ಎಲ್ಲರೂ ಸಂತಸದಿಂದ ಬಾಳುವಂತಾಗಲಿ ಎಂದು ಹರಸಿದರು.
ಸಚಿವ ಯು.ಟಿ.ಖಾದರ್ ಮಾತನಾಡಿ, ಬಿಷಪ್ ಅವರ ಸೌಹಾರ್ದ ಭೇಟಿಯಿಂದಾಗಿ ಪ್ರೀತಿ ವಿಶ್ವಾಸ ಹಂಚುವ ಅವಕಾಶವಾಗಿದೆ. ಕ್ರಿಸ್‌ಮಸ್ ಎಲ್ಲರೂ ಸೇರಿಸಿಕೊಂಡು ಆಚರಿಸುವ ಹಬ್ಬವಾಗಿದೆ. ಈ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ದೊರೆಯಲಿ ಎಂದು ಹಾರೈಸಿದರು.
ಇದೇ ಸಂದರ್ಭ ಭಜನಾ ಮಂಡಳಿಯ ವತಿಯಿಂದ ಬಿಷಪ್ ಹಾಗೂ ಸಚಿವ ಖಾದರ್ ಅವರನ್ನು ಅಭಿನಂದಿಸಲಾಯಿತು.
ಕಾಂಗ್ರೆಸ್ ಮುಖಂಡರಾದ ಸುರೇಶ್ ಭಟ್ನಾಗರ, ಬಾಝಿಲ್ ಡಿಸೋಜ, ಮಂದಿರದ ಅಧ್ಯಕ್ಷ ಪದ್ಮನಾಭ, ಮೋಹನ್ ಬಂಗೇರ, ಚೇತನ್ ಕುಮಾರ್ ಶೆಟ್ಟಿ, ಸಚ್ಚೀಂದ್ರ ಸಾಲ್ಯಾನ್ ಮುಂತಾದವರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ತೊಕ್ಕೊಟ್ಟು ಸಂತ ಸೆಬೆಸ್ಟಿಯನ್ ಚರ್ಚಿನಲ್ಲಿ ನಡೆದ ಸಂಭ್ರಮದ ಕ್ರಿಸ್ಮಸ್ ಹಬ್ಬ ಆಚರಣೆಯಲ್ಲಿ ಬಿಷಪ್ ಸಚಿವ ಯು.ಟಿ.ಖಾದರ್ ಭಾಗವಹಿಸಿದ್ದರು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಂಗಳೂರು ಬಿಷಪ್ ಫಾ.ಪೀಟರ್ ಪೌಲ್ ಸಲ್ದಾನ ಭಾಗವಹಿಸಿ ಶುಭ ಹಾರೈಸಿದರು.