ನೃತ್ಯವೂ ಒಂದು ಯೋಗ: ಪಲಿಮಾರುಶ್ರೀ
ಉಡುಪಿಯಲ್ಲಿ 18ನೇ ಭರತಮುನಿ ಜಯಂತಿ

ಉಡುಪಿ, ಡಿ. 25: ನೃತ್ಯ ಕಲೆಯೂ ಒಂದು ರೀತಿಯಲ್ಲಿ ಯೋಗವಿದ್ದಂತೆ. ಇದರಿಂದ ದೇಹದ ಆಲಸ್ಯ ನಿವಾರಣೆಯಾಗಿ, ಮಾನಸಿಕ ಕ್ಲೇಶ ದೂರವಾಗು ವುದು ಎಂದು ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಮಂಗಳವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಉಡುಪಿಯ ರಾಧಾಕಷ್ಣ ನತ್ಯನಿಕೇತನ ಹಮ್ಮಿಕೊಂಡ 18ನೇ ವರ್ಷದ ಭರತಮುನಿ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡುತಿದ್ದರು.
ನೃತ್ಯ ಎಂಬುದು ಭಗವಂತನ ಪೂಜೆಯ ಒಂದು ಭಾಗವಾಗಿದೆ. ಶಾಸ್ತ್ರೀಯ ನೃತ್ಯದ ಮೂಲಕ ಮಕ್ಕಳಿಗೆ ಪ್ರಾಚೀನ ಸಂಸ್ಕೃತಿಯ ಪರಿಚಯದೊಂದಿಗೆ ಒಳ್ಳೆಯ ಸಂಸ್ಕಾರವನ್ನು ಕಲಿಸಬಹುದಾಗಿದೆ. ಅಲ್ಲದೇ ನಮ್ಮೀ ಪ್ರಾಚೀನ ಕಲೆಯ ಸಂರಕ್ಷಣೆಯೂ ಇದರಿಂದ ಸಾಧ್ಯವಾಗಿದೆ ಎಂದು ಪಲಿಮಾರು ಶ್ರೀಗಳು ನುಡಿದರು.
ಇಂದು ನೃತ್ಯ ಕೇವಲ ಮನರಂಜನೆಗೆ ಸೀಮಿತವಾಗದೆ, ಆಧುನಿಕ ಜೀವನ ಶೈಲಿಯಲ್ಲಿ ಮನುಷ್ಯ ಎದುರಿಸುತ್ತಿರುವ ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಪರಿಣಾಮಕಾರಿ ಚಿಕಿತ್ಸೆಯಾಗಿ ರೂಪು ಪಡೆದಿದೆ. ನೃತ್ಯ ಮನಸ್ಸಿಗೆ ಮುದ ನೀಡುವುದರೊಂದಿಗೆ ಮಾನಸಿಕ ಒತ್ತಡ ನಿವಾರಣೆ, ದೈಹಿಕ ಬಳಲಿಕೆ ನಿವಾರಿಸಿ ಮನಸ್ಸನು್ನ ಪ್ರಶಾಂತವಾಗಿರಿಸುತ್ತದೆ ಎಂದರು.
ಇದೇ ವೇಳೆ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ, ಸ್ಯಾಕ್ಸೋಫೋನ್ ವಾದಕ ವಿದ್ವಾನ್ ಅಲೆವೂರು ಸುಂದರ ಶೇರಿಗಾರ್, ವಿದುಷಿ ರೂಪಶ್ರೀ ಮಧುಸೂದನ್, ವಿದುಷಿ ಪೊನ್ನಮ್ಮ ದೇವಯ್ಯ, ಕುಚುಪುಡಿ ನೃತ್ಯ ಗುರು ಡಾ. ಸರಸ್ವತಿ ರಜತೇಶ್ ಅವರಿಗೆ ಭರತ ಪ್ರಶಸ್ತಿ ಪ್ರದಾನ ಮಾಡಿದರು.
ಅಲ್ಲದೇ ವಿದುಷಿಗಳಾದ ಗಾಯತ್ರಿ ಅಭಿಷೇಕ್, ಕಲ್ಯಾಣಿ ಜೆ.ಪೂಜಾರಿ, ಶ್ವೇತಶ್ರೀ ಭಟ್, ಸುಷ್ಮಾ ಡಿ.ಪ್ರಭು ಅವರಿಗೆ ಗುರು ರಾಧಾಕೃಷ್ಣಾನುಗ್ರಹ ಪ್ರಶಸ್ತಿ ಹಾಗೂ ವಿಜಯ ಕುಮಾರ್‌ಗೆ ಕಲಾರ್ಪಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಾಹಿತಿ ಅಂಬಾತನಯ ಮುದ್ರಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸಂಸ್ಥೆಯ ಸಂಚಾಲಕ ಮುರಳೀಧರ ಸಾಮಗ ಉಪಸ್ಥಿತರಿದ್ದರು. ನಿರ್ದೇಶಕಿ ವಿದುಷಿ ವೀಣಾ ಎಂ.ಸಾಮಗ ಸ್ವಾಗತಿಸಿದರು. ಸಂಜೆ ರಾಜಾಂಗಮದಲ್ಲಿ ರಾಧಾಕೃಷ್ಣ ನೃತ್ಯ ನಿಕೇತನದ ವಿದ್ಯಾರ್ಥಿಗಳಿಂದ ಭರತ ನಾಟ್ಯ, ಕುಚುಪುಡಿ, ಯಕ್ಷಗಾನ ಜುಗಲ್‌ಬಂದಿ, ಭರತ ನಾಟ್ಯ, ಕಥಕ್ ಜುಗಲ್‌ಬಂದಿ ಅಲ್ಲದೇ ವಿಶೇಷ ನೃತ್ಯ ಕಾರ್ಯಕ್ರಮಗಳು ನಡೆದವು.