ಸುವರ್ಣ ನದಿ ತಟದಲ್ಲಿ ಪುಸ್ತಕ ಬಿಡುಗಡೆ

ಉಡುಪಿ, ಡಿ.25: ಸ್ಥಳೀಯ ಎಂ.ಜಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಮಂಜುನಾಥ್ ಕಾಮತ್ ಅವರ ಮೂರನೇ ಪುಸ್ತಕ ‘ನಾನು ಸನ್ಯಾಸಿಯಾಗಲು ಹೊರಟಿದ್ದೆ!’ ಕಾರ್ಕಳ ಕಡಾರಿಯ ಸುವರ್ಣಾ ನದಿಯ ತಟದಲ್ಲಿ ವಿಶಿಷ್ಟ ರೀತಿಯಲ್ಲಿ ಅನಾವರಣಗೊಂಡಿತು.
ಸಾವಿರ ಹಣತೆಗಳ ಬೆಳಕು, ನಾದ ಮಣಿನಾಲ್ಕೂರು ಅವರ ಕತ್ತಲ ಹಾಡುಗಳ ಮಧ್ಯೆ ಮಂಗಳಮುಖಿಯರಾದ ಕಾಜಲ್ ಹಾಗೂ ನಗ್ಮಾ, ಸುವರ್ಣಾ ನದಿಗೆ ಆರತಿ ಬೆಳಗುವುದರ ಜೊತೆಗೆ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಉಡುಪಿಯ ಉದ್ಯಮಿ ವಿಶ್ವನಾಥ ಶೆಣೈ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿ ‘ಇದೊಂದು ತುಂಬಾ ವಿಭಿನ್ನವಾದ ಕಾರ್ಯಕ್ರಮ. ಒಂದರ್ಥದಲ್ಲಿ ಇದು ಲಕ್ಷ ದೀಪೋತ್ಸವ. ಇಷ್ಟೊಂದು ಸಂಭ್ರಮದಲ್ಲಿ ಪುಸ್ತಕ ಬಿಡುಗಡೆ ಯಾಗುತ್ತಿರುವುದು ತೀರಾ ಹೊಸ ಅನುಭವ’ ಎಂದು ಹೇಳಿದರು.
ಲೇಖಕ ಮಂಜುನಾಥ ಕಾಮತ್ ಮಾತನಾಡಿ, ನಮಗೆ ನದಿ, ಪರಿಸರದ ಕಾಳಜಿ ಅತ್ಯಂತ ಮುಖ್ಯ. ಆ ಕುರಿತು ಪ್ರೀತಿ ಮೂಡಿಸುವ ಸಲುವಾಗಿ ಸುವರ್ಣಾ ನದಿ ತಟದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿ ರುವುದಾಗಿ ತಿಳಿಸಿದರು.
ಕಾಶಿಯಲ್ಲಿ ವಿವಿಧ ಸಂದರ್ಭಗಳಲ್ಲಿ ಲಕ್ಷಗಟ್ಟಲೆ ದೀಪಗಳನ್ನು ಹಚ್ಚಿ ಆರತಿ ಬೆಳಗುವ ಸಂಪ್ರದಾಯವಿದೆ. ಕಾಶೀ ಪ್ರವಾಸಕ್ಕೆ ಹೋದ ಸಂದರ್ಭ ಅದನ್ನು ನೋಡಲು ಸಾಧ್ಯವಾಗಿರಲಿಲ್ಲ. ಆ ಕಾರಣಕ್ಕೇ ನಮ್ಮೂರಲ್ಲೇ ಸಾವಿರ ಹಣತೆ ಗಳನ್ನಾದರೂ ಹಚ್ಚಿ, ತಾವು ಹೆಣ್ಣೆಂದು ಅಭಿವ್ಯಕ್ತಿ ಪಡಿಸಲು ಒದ್ದಾಡುವ ಮಂಗಳಮುಖಿಯರಿಂದ ನಾವು ಹೆಣ್ಣೆಂದು ಪೂಜಿಸುವ ನದಿಗೆ ಆರತಿ ಬೆಳಗಿ ಸಂಭ್ರಮಿಸುತ್ತಿದ್ದೇವೆ ಎಂದು ಕಾಮತ್ ವಿವರಿಸಿದರು.
ಆಕೃತಿ ಪ್ರಿಂಟರ್ಸ್‌ನ ಕಲ್ಲೂರು ನಾಗೇಶ್ ಪ್ರಸ್ತಾವನೆಗೈದು, ಕಾರ್ಯಕ್ರಮ ನಿರೂಪಿಸಿದರು. ನೂರಾರು ಮಂದಿ ಈ ಅಪರೂಪದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.