ರಫೇಲ್ ಹಗರಣದ ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚಿಸಿ ಉತ್ತರ ನೀಡಲಿ: ಯು.ಟಿ.ಖಾದರ್

ಮಂಗಳೂರು, ಡಿ. 25: ರಫೇಲ್ ವಿಮಾನ ಖರೀದಿ ಹಗರಣದ ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚಿಸಿ ತನಿಖೆಗೆ ಅವಕಾಶ ಮಾಡಿಕೊಡುವ ಮೂಲಕ ಜನತೆಗೆ ಸೂಕ್ತ ಉತ್ತರ ನೀಡಲಿ ಎಂದು ವಸತಿ ಹಾಗೂ ನಗರಾಭಿವೃದ್ಧಿ ಖಾತೆ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಈ ರೀತಿ ಜಂಟಿ ಸಂಸದೀಯ ಸಮಿತಿಯಲ್ಲಿ ಎಲ್ಲಾ ಪಕ್ಷದ ಸದಸ್ಯರಿರುತ್ತಾರೆ ಮತ್ತು ಅಧ್ಯಕ್ಷರನ್ನು ನೇಮಿಸಲಾಗುತ್ತದೆ. ಈ ರೀತಿಯ ಸಮಿತಿ ರಚಿಸುವ ಮೂಲಕ ಹಗರಣದ ಬಗ್ಗೆ ಸಮರ್ಪಕವಾದ ತನಿಖೆ ನಡೆಸಲು ಸಾಧ್ಯ. ಪ್ರಕರಣದ ಬಗ್ಗೆ ಸರಕಾರ ನೀಡಿರುವ ಮಾಹಿತಿಯ ಆಧಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಕೇಂದ್ರ ಸರಕಾರ ನ್ಯಾಯಾಲಯಕ್ಕೆ ಪ್ರಕರಣದ ಬಗ್ಗೆ ಸಮರ್ಪಕವಾದ ಮಾಹಿತಿಯನ್ನು ನೀಡದೆ ಇರುವುದರಿಂದ ನ್ಯಾಯಾಲಯವೂ ಸೂಕ್ತ ತೀರ್ಮಾನ ಕೈಗೊಳ್ಳುವುದು ಸಾಧ್ಯವಾಗಿಲ್ಲ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.
ಬೆಳಗಾವಿ ಅಧಿವೇಶನದಲ್ಲಿ ವಿಪಕ್ಷಗಳಿಂದ ಅಮೂಲ್ಯ ಸಮಯ ವ್ಯರ್ಥ
ಬೆಳಗಾವಿ ಅಧಿವೇಶನ ಯಶಸ್ವಿಯಾಗಿ ನಡೆದಿದೆ. ಆದರೂ ಅಧಿವೇಶನದಲ್ಲಿ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಚರ್ಚೆಗೆ ಅವಕಾಶ ಇತ್ತು. ಸಾಕಷ್ಟು ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯ ಇತ್ತು. ಆದರೆ ವಿಪಕ್ಷಗಳು ಜವಾಬ್ದಾರಿಯುತವಾಗಿ ವರ್ತಿಸದೆ, ಗೊಂದಲ ಸೃಷ್ಟಿಸಲು ಪ್ರಯತ್ನಿಸಿದ್ದಾರೆ. ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸುವುದರ ಬದಲು ಅನಗತ್ಯ ವಿಚಾರಗಳನ್ನು ಮುಂದಿಟ್ಟು ಸದನದ ಒಳಗೆ ಧರಣಿ ನಡೆಸಿ, ಕಲಾಪ ನಡೆಸಲು ಬಿಡದೆ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದ್ದಾರೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಪೌರ ಕಾರ್ಮಿಕರಿಗೆ ವಸತಿ ಯೋಜನೆ
ಪೌರ ಕಾರ್ಮಿಕರಿಗೆ ವಸತಿ ಯೋಜನೆಯ ಪ್ರಕಾರ ನಿರ್ಮಿಸಲಾಗುತ್ತಿರುವ ಮನೆ ತೀರಾ ಚಿಕ್ಕದಾಗಿದ್ದು ವಾಸಿಸಲು ಕಷ್ಟ ಪಡುತ್ತಿದ್ದಾರೆ. ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತೀರಿ ಎಂಬ ಪತ್ರಕರ್ತರ ಪ್ರಶ್ನೆಗೆ, ಪೌರ ಕಾರ್ಮಿಕರಿಗೆ ವಸತಿಯೋಜನೆಯಲ್ಲಿ ನಿರ್ಮಿಸುವ ಮನೆಯ ವಿಸ್ತೀರ್ಣವನ್ನು ಹೆಚ್ಚಿಸುವ ಬಗ್ಗೆ ಕೇಂದ್ರ ಸರಕಾರದ ಗಮನಕ್ಕೆ ತಂದು ಪ್ರಯತ್ನಿಸುವುದಾಗಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.