ಕರಾವಳಿಯಾದ್ಯಂತ ಸಂಭ್ರಮದ ಕ್ರಿಸ್‌ಮಸ್ ಸಡಗರ

ಮಂಗಳೂರು, ಡಿ.25: ಕರಾವಳಿಯಾದ್ಯಂತ ಕ್ರೈಸ್ತರು ಸೋಮವಾರ ರಾತ್ರಿ ಹಾಗೂ ಮಂಗಳವಾರ ಕ್ರಿಸ್‌ಮಸ್ ಹಬ್ಬವನ್ನು ಸಡಗರ- ಸಂಭ್ರಮದಿಂದ ಆಚರಿಸಿದರು.
ಹಬ್ಬದ ಹಿನ್ನೆಲೆಯಲ್ಲಿ ವರ್ಷಂಪ್ರತಿ ನಡೆಯುವಂತೆ ಡಿ. 24ರಂದು ಮಧ್ಯರಾತ್ರಿ ದ.ಕ. ಜಿಲ್ಲೆಯ ಚರ್ಚ್‌ಗಳಲ್ಲಿ ವಿಶೇಷ ಬಲಿಪೂಜೆ, ಪ್ರಾರ್ಥನೆಗಳು ನಡೆಯಿತು. ಮಂಗಳೂರಿನ ರೊಸಾರಿಯೋ ಕೆಥೆಡ್ರೆಲ್‌ನಲ್ಲಿ ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯ ಧರ್ಮಾಧ್ಯಕ್ಷ ಡಾ.ಪೀಟರ್ ಪಾವ್ಲ್ ಸಲ್ದಾನ ಬಲಿಪೂಜೆ ನಡೆಸಿ ಕ್ರಿಸ್‌ಮಸ್ ಸಂದೇಶ ನೀಡಿದರು.
ಕ್ರೈಸ್ತರು ಬೆಳಗ್ಗೆ ಚರ್ಚ್‌ಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ, ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ನಗರದ ಮಿಲಾಗ್ರಿಸ್ ಚರ್ಚ್, ರೊಜಾರಿಯೋ ಕೆಥೆಡ್ರಲ್, ಬೋಂದೆಲ್ ಸೇಂಟ್ ಲಾರೆನ್ಸ್ ಚರ್ಚ್, ಲೇಡಿಹಿಲ್ ಚರ್ಚ್, ಬೆಂದೂರ್‌ವೆಲ್ ಸೇಂಟ್ ಸೆಬಾಸ್ಟಿಯನ್ ಚರ್ಚ್, ಕುಲಶೇಖರ ಚರ್ಚ್, ವೆಲೆನ್ಸಿಯಾ, ಬಿಕರ್ನಕಟ್ಟೆ ಚರ್ಚ್ ಸಹಿತ ಮಂಗಳೂರು ಧರ್ಮಪ್ರಾಂತದ ಎಲ್ಲ ಚರ್ಚ್‌ಗಳಲ್ಲಿ ಸೋಮವಾರ ಮಧ್ಯರಾತ್ರಿ ಹಾಗೂ ಮಂಗಳವಾರ ಬೆಳಗ್ಗೆ ವಿಶೇಷ ಪೂಜೆಗಳು ನಡೆದವು. ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಗೋದಲಿ, ನಕ್ಷತ್ರ ಸ್ಪರ್ಧೆ:
ಧರ್ಮಪ್ರಾಂತದ ಎಲ್ಲ 12 ವಲಯದ 124 ಚರ್ಚ್‌ಗಳ ವ್ಯಾಪ್ತಿಯ ವಾರ್ಡ್‌ಗಳಲ್ಲಿ ನಿರ್ಮಿಸಿದ ಕ್ರಿಸ್ತನು ಕೊಟ್ಟಿಗೆಯಲ್ಲಿ ಜನಿಸಿದ್ದನ್ನು ಸಾಂಕೇತಿಸುವ ಗೋದಲಿ ಹಾಗೂ ನಕ್ಷತ್ರಗಳ ರಚನೆಯನ್ನು ಸಂಬಂಧಪಟ್ಟ ಗುರುಗಳು ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದರು.
ಬೆಂದೂರು ಸಂತ ಸೆಬಾಸ್ಟಿಯನ್ ಚರ್ಚ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ರೈಸ್ತರಲ್ಲದೆ ಇತರ ಸಮುದಾಯದ ಜನರು ಕೂಡ ಭಾಗವಹಿಸಿದರು. ಈ ಚರ್ಚ್‌ನಲ್ಲಿ ಕಳೆದ 42 ವರ್ಷಗಳಿಂದ ಕ್ರಿಸ್‌ಮಸ್ ಫಿಯೇಸ್ತ ಜನಪ್ರಿಯವಾಗಿದೆ. ಇಲ್ಲಿ ರಂಜನೆಯ ಆಟದಲ್ಲಿ ಸಂಗ್ರಹವಾಗುವ ಹಣವನ್ನು ತೆನೆ ಹಬ್ಬ ಸಂದರ್ಭ ಚರ್ಚ್ ವ್ಯಾಪ್ತಿಯ ಬಡವರಿಗೆ ದಾನ ಮಾಡುವ ಪರಿಪಾಟ ಪರಿಪಾಟ ಬೆಳೆದುಬಂದಿದೆ.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಬೆಳಗ್ಗಿನಿಂದಲೇ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಸಹಿತ ವಿವಿಧ ಕ್ಷೇತ್ರಗಳ ಗಣ್ಯರ ಮನೆಗಳಿಗೆ ಭೇಟಿ ನೀಡಿ ಕ್ರಿಸ್‌ಮಸ್ ಶುಭಾಶಯ ಕೋರಿದರು. ಐವನ್ ಮನೆಯಲ್ಲಿ ಮಧ್ಯಾಹ್ನ ಏರ್ಪಡಿಸಿದ ವಿಶೇಷ ಔತಣ ಕೂಟದಲ್ಲಿ ಹಿರಿಯ ರಾಜಕಾರಣಿಗಳು, ಜನಪ್ರತಿನಿಧಿಗಳು, ಮುಖಂಡರು ಭಾಗವಹಿಸಿದರು.