ಪ್ರತ್ಯೇಕ ಘಟನೆ: ಇಬ್ಬರು ವೃದ್ಧರಿಂದ ಸೊತ್ತು ಅಪಹರಣ
ಉಡುಪಿ ನಗರದಲ್ಲಿ ಹಾಡುಹಗಲೇ ನಡೆದ ಪ್ರಕರಣ

ಉಡುಪಿ, ಡಿ.25: ಇಂದು ಉಡುಪಿ ನಗರದೊಳಗೆ ಮುಕ್ಕಾಲು ಗಂಟೆಯ ಅಂತರದಲ್ಲಿ ಎರಡು ಪ್ರತ್ಯೇಕ ಘಟನೆಯಲ್ಲಿ ಇಬ್ಬರು ವೃದ್ಧರ ಬೆಳೆಬಾಳುವ ಸೊತ್ತುಗಳನ್ನು ದೋಚಿದ ಪ್ರಕರಣಗಳು ವರದಿಯಾಗಿವೆ.
ಮೊದಲ ಪ್ರಕರಣ ನಡೆದಿರುವುದು ಬೆಳಗ್ಗೆ 8:45ರ ಸುಮಾರಿಗೆ ಅಂಬಾಗಿಲು ಜಂಕ್ಷನ್‌ನ ಫಿಶ್ ಮಾರ್ಕೆಟ್ ಬಳಿ. ಬೆಳಗ್ಗೆ ಹೂವು ತರಲೆಂದು ಅಂಬಾಗಿಲು ಜಂಕ್ಷನ್ ಕಡೆ ನಡೆದುಕೊಂಡು ಹೋಗುತಿದ್ದ ಮಾಂಡವಿ ಫ್ರಿನ್ಸ್ ಪ್ಯಾಲೇಸ್‌ನ ನಿವಾಸಿ ವೆಂಕಟರಮಣ ಆಚಾರ್ಯ (68)ರನ್ನು ತಡೆದು ನಿಲ್ಲಿಸಿದ ಒಬ್ಬ ವ್ಯಕ್ತಿ, ಪಕ್ಕದಲ್ಲಿ ಬೈಕ್‌ನೊಂದಿಗೆ ನಿಂತಿದ್ದ ಮತ್ತೊಬ್ಬ ವ್ಯಕ್ತಿಯನ್ನು ತೋರಿಸಿ, ಸಾಬ್ ಬುಲಾರಹೆ ಹೇ ಎಂದು ಆತನ ಬಳಿ ಕರೆದೊಯ್ದ.
ಬೈಕ್ ಬಳಿ ನಿಂತಿದ್ದ ವ್ಯಕ್ತಿ, ಇಲ್ಲಿ ಗಲಾಟೆಯಾಗುತ್ತಿರುವುದು ಗೊತ್ತಿಲ್ಲವೇ ಎಂದು ಹೇಳಿ, ಆಚಾರ್ಯರ ಕಿಸೆಯಲ್ಲಿದ್ದ ಕರ್ಚಿಫ್‌ನ್ನು ಹೊರತೆಗೆದು, ಅವರ ಬಳಿ ಇದ್ದ ವಾಚ್, ಅಂಗಿ ಕಿಸೆಯಲ್ಲಿದ್ದ 1000ರೂ. ನಗದು, ಕುತ್ತಿಗೆಯಲ್ಲಿದ್ದ ಚೈನ್‌ನ್ನು ಕರ್ಚಿಫ್‌ನಲ್ಲಿ ಕಟ್ಟಿ, ಅದನ್ನು ವೆಂಕಟರಮಣ ಆಚಾರ್ಯರಿಗೆ ನೀಡಿದರು.
ಆಚಾರ್ಯರು ಸ್ವಲ್ಪ ದೂರ ಹೋಗಿ ಗಂಟು ಬಿಚ್ಚಿ ನೋಡಿದಾಗ ಅದರಲ್ಲಿ ವಾಚ್ ಮತ್ತು ಒಂದು ಸಾವಿರ ರೂ.ನಗದು ಮಾತ್ರ ಇದ್ದು, ಚಿನ್ನದ ಚೈನ್ ಇರಲಿಲ್ಲ. 24 ಗ್ರಾಂ ತೂಕದ ಈ ಚಿನ್ನದ ಚೈನ್‌ನ ಅಂದಾಜು ಬೆಲೆ 50 ಸಾವಿರ ರೂ.ಎಂದು ಹೇಳಲಾಗಿದೆ.
ಕೂಡಲೇ ಅವರು ಬೈಕ್ ಇದ್ದ ಜಾಗಕ್ಕೆ ಬಂದು ನೋಡಿದಾಗ ಅಲ್ಲಿ ಇಬ್ಬರು ವ್ಯಕ್ತಿಗಳೂ ನಾಪತ್ತೆಯಾಗಿದ್ದರು. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣ ನಡೆದಿರುವುದು ಉಡುಪಿ ಸಿಟಿಬಸ್ ನಿಲ್ದಾಣದ ಗುರುಕೃಪಾ ಸ್ಟುಡಿಯೋದ ಬಸ್‌ಸ್ಟಾಫ್ ಬಳಿ. ಬೆಳಗ್ಗೆ 9:25ರ ಸುಮಾರಿಗೆ ಮಠದಬೆಟ್ಟು ಕೊಪ್ಪರ ತೋಟದ ಭಾಸ್ಕರ ಪೂಜಾರಿ (61) ಎಂಬವರು ಅಲ್ಲಿ ಬಸ್‌ಗಾಗಿ ಕಾಯುತಿದ್ದಾಗ, ಅಪರಿಚತ ವ್ಯಕ್ತಿ ಬಂದು, ಹಿಂದಿಯಲ್ಲಿ ನಾನು ಸೆಕ್ಯುರೀಟಿ ವಿಭಾಗದವನು. ಅಧಿಕಾರಿ ಅಲ್ಲಿದ್ದಾರೆಂದು ಹೇಳಿ ಪಕ್ಕದಲ್ಲಿರುವ ಎಸ್‌ವಿಸಿ ಬ್ಯಾಂಕ್ ಎದುರು ಕರೆದೊಯ್ದಾಗ ಅಲ್ಲಿ ಇಬ್ಬರು ಇವರನ್ನು ತಪಾಸಣೆಯ ನೆಪದಲ್ಲಿ ಅವರಲ್ಲಿದ್ದ ಚಿನ್ನದ ಸರ, ಮೊಬೈಲ್, ವಾರ್ಚ್‌ನ್ನು ಕರ್ಚಿಫ್‌ನಲ್ಲಿ ಸುತ್ತಿ ನೀಡುವಂತೆ ನಟಿಸಿದ್ದರು.
ಭಾಸ್ಕರ ಪೂಜಾರಿ ಅವರು ಸ್ವಲ್ಪ ದೂರ ಹೋಗಿ ಕರ್ಚಿಫ್ ಬಿಚ್ಚಿದಾಗ ಅದರಲ್ಲಿ ವಾಚ್ ಮತ್ತು ಮೊಬೈಲ್ ಮಾತ್ರ ಇದ್ದು ಚಿನ್ನದ ಸರ ಇರಲಿಲ್ಲ. ಸ್ಥಳಕ್ಕೆ ಹೋದಾಗ ಮೂವರೂ ಪರಾರಿಯಾಗಿದ್ದರು. 12 ಗ್ರಾಂ ತೂಕದ ಇವರ ಚಿನ್ನದ ಸರದ ಮೌಲ್ಯ 24,000 ರೂ.ಗಳೆಂದು ಅಂದಾಜಿಸಲಾಗಿದೆ.
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.