ಅಯೋಧ್ಯೆ ವಿವಾದದ ಅರ್ಜಿಯ ತುರ್ತು ವಿಚಾರಣೆ: ರವಿಶಂಕರ್ ಪ್ರಸಾದ್ ಮನವಿ

ಲಕ್ನೊ, ಡಿ.25: ಅಯೋಧ್ಯೆ ವಿವಾದದ ಕುರಿತ ಅರ್ಜಿಯ ತುರ್ತು ವಿಚಾರಣೆ ನಡೆಸಬೇಕೆಂದು ಸುಪ್ರೀಂಕೋರ್ಟ್ಗೆ ಮನವಿ ಮಾಡಿಕೊಂಡಿರುವ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಶಬರಿಮಲೆ ಕುರಿತ ವಿವಾದವನ್ನು ಪರಿಹರಿಸಿದಂತೆಯೇ ನ್ಯಾಯಾಲಯ ಸುದೀರ್ಘಾವಧಿಯಿಂದ ಬಾಕಿ ಇರುವ ಅಯೋಧ್ಯೆ ವಿವಾದವನ್ನೂ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇಲ್ಲಿ ಸೋಮವಾರ ಆರಂಭಗೊಂಡ ಅಖಿಲ ಭಾರತೀಯ ಅಧಿವಕ್ತ ಪರಿಷದ್ನ 15ನೇ ವಾರ್ಷಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ಷಿಪ್ರಗತಿ ನ್ಯಾಯಾಲಯದ ರೀತಿ ಕಾರ್ಯನಿರ್ವಹಿಸಿ ಈ ಪ್ರಕರಣವನ್ನು ಶೀಘ್ರ ಮುಕ್ತಾಯಗೊಳಿಸುವಂತೆ ಸುಪ್ರೀಂಕೋರ್ಟ್ಗೆ ವೈಯಕ್ತಿಕವಾಗಿ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು.
ಸಂವಿಧಾನದಲ್ಲಿ ರಾಮ, ಕೃಷ್ಣ ಹಾಗೂ ಅಕ್ಬರ್ ಹೆಸರನ್ನು ಉಲ್ಲೇಖಿಸಲಾಗಿದೆ. ಆದರೆ ಬಾಬರ್ ಹೆಸರಿಲ್ಲ. ಆದರೆ ಈ ಬಗ್ಗೆ ಮಾತಾಡಿದರೆ ಹೊಸ ವಿವಾದ ಆರಂಭವಾಗುತ್ತದೆ ಎಂದು ಸಚಿವ ಪ್ರಸಾದ್ ಹೇಳಿದರು. ಮುಂದಿನ ದಿನಗಳಲ್ಲಿ ನ್ಯಾಯಾಧೀಶರ ನೇಮಕ ಪ್ರಕ್ರಿಯೆಗೆ ಅಖಿಲ ಭಾರತ ನ್ಯಾಯಾಂಗ ಸೇವೆಯ ವ್ಯವಸ್ಥೆಯನ್ನು ಆರಂಭಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದ ಅವರು, ಬಡವರು ಹಾಗೂ ನಿರ್ಗತಿಕರಿಗೆ ಸಂಬಂಧಿಸಿದ ಪ್ರಕರಣಗಳನ್ನು ಸೂಕ್ತವಾಗಿ ವಿಚಾರಣೆ ನಡೆಸುವಂತಾಗಲು ಅಧಿವಕ್ತ ಪರಿಷದ್ನ ಸದಸ್ಯರು ನೆರವಾಗಬೇಕು ಎಂದರು. ಸುಪ್ರೀಂಕೋರ್ಟ್ನ ನ್ಯಾಯಾಧೀಶ ಎಂ.ಆರ್.ಶಾ, ಅಲ್ಲಹಾಬಾದ್ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶ ಗೋವಿಂದ್ ಮಾಥುರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.