ಮಂಗಳೂರಿನಲ್ಲಿ ದರೋಡೆ ತಂಡ: ಉಳ್ಳಾಲದಲ್ಲಿ ಪೊಲೀಸರಿಂದ ಹೈ ಅಲರ್ಟ್

ಉಳ್ಳಾಲ, ಡಿ. 25: ಹೊರರಾಜ್ಯದ ದರೋಡೆ ತಂಡವೊಂದು ದ.ಕ-ಉಡುಪಿ ಜಿಲ್ಲೆಗಳಿಗೆ ಬಂದಿದೆ ಎನ್ನಲಾಗುತ್ತಿದ್ದು, ಗಮನ ಬೇರೆಡೆ ಸೆಳೆದು ದರೋಡೆಗೈಯ್ಯುವ ತಂಡ ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ ಉಳ್ಳಾಲ ಮತ್ತು ಕೊಣಾಜೆ ಠಾಣಾ ಪೊಲೀಸರು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪಿಸಿಆರ್ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
ಐದು ಮಂದಿಯ ತಂಡ ಉಡುಪಿ ಜಿಲ್ಲೆಯಲ್ಲಿ ಕಾಲಿಟ್ಟು, ಈಗಾಗಲೇ ದರೋಡೆ ನಡೆಸಿದೆ. ನಿರ್ಜನ ಪ್ರದೇಶಗಳಲ್ಲಿ ಕಾರ್ಯಾಚರಿಸುವ ತಂಡ ರಸ್ತೆಯಲ್ಲಿ ಹೋಗುವವರನ್ನು ತಡೆದು, ರಸ್ತೆಯಲ್ಲಿ ಒಂದು ಕೊಲೆಯಾಗಿದೆ, ಅಥವಾ ಗಲಾಟೆಯಾಗುತ್ತಿದೆ ಎಂದು ಹೇಳುತ್ತಾರೆ. ಬಳಿಕ ನಿಮ್ಮಲ್ಲಿರುವ ಸೊತ್ತುಗಳನ್ನು ತಮ್ಮಲ್ಲಿ ನೀಡಿ ನೀವು ರಸ್ತೆಯಲ್ಲಿ ಮುಂದೆ ಹೋಗಿ, ಇನ್ನೊಂದು ಭಾಗದಲ್ಲಿ ನಾವು ತಂದು ಕೊಡುತ್ತೇವೆ ಎಂದು ನಂಬಿಸಿ ಅಮಾಯಕರನ್ನು ದರೋಡೆ ನಡೆಸುತ್ತಿದೆ. ಇದೀಗ ತಂಡ ಮಂಗಳೂರಿಗೂ ಕಾಲಿಸಿರಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಪೊಲೀಸ್ ಕಂಟ್ರೋಲ್ ರೂಂ ಆದೇಶದಂತೆ ಉಳ್ಳಾಲ ಮತ್ತು ಕೊಣಾಜೆ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ. ಪಿಸಿಆರ್ ವಾಹನದ ಮೂಲಕ ಸಾರ್ವಜನಿಕವಾಗಿ ಜಾಗೃತಿ ಪ್ರಕಟಣೆಯನ್ನು ನೀಡುತ್ತಿದ್ದಾರೆ. ಈಗಾಗಲೇ ತೊಕ್ಕೊಟ್ಟು, ಉಳ್ಳಾಲ, ಸೋಮೇಶ್ವರ, ತಲಪಾಡಿ ಹಾಗೂ ಕೊಣಾಜೆ ಭಾಗಗಳಲ್ಲಿ ಘೋಷಣೆ ಮಾಡಿದ್ದಾರೆ.





