ಸುದ್ದಿಗೋಷ್ಠಿ ಬಿಡಿ, ಕಾರ್ಯಕರ್ತನ ಪ್ರಶ್ನೆಗೆ ಉತ್ತರಿಸಲೂ ಮೋದಿಗೆ ಸಾಧ್ಯವಿಲ್ಲ: ರಾಹುಲ್ ಲೇವಡಿ
‘ವಣಕ್ಕಂ ಪುದುಚೇರಿ’ ಎಂದು ಕುಟುಕಿದ ಕಾಂಗ್ರೆಸ್ ಅಧ್ಯಕ್ಷ

ಹೊಸದಿಲ್ಲಿ, ಡಿ.25: ಇತ್ತೀಚೆಗೆ ಪಕ್ಷದ ಕಾರ್ಯಕರ್ತರೊಂದಿಗೆ ನಡೆಸಿದ ವೀಡಿಯೊ ಸಂವಾದ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತ ತೆರಿಗೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸದೆ ನುಣುಚಿಕೊಂಡಿರುವ ಪ್ರಧಾನಿ ಮೋದಿಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.
ಸಮಸ್ಯೆಯ ಭಾರದಿಂದ ಬಳಲುತ್ತಿರುವ ಮಧ್ಯಮ ವರ್ಗದ ಜನತೆಗೆ ‘ನಮೋ’ ನೀಡುವ ಉತ್ತರ ‘ವಣಕ್ಕಂ ಪುದುಚೇರಿ’ ಎಂಬುದಾಗಿದೆ. ಸುದ್ದಿಗೋಷ್ಠಿಯ ಮಾತು ಹಾಗಿರಲಿ, ಅವರು ಬೂತ್ ಮಟ್ಟದ ಕಾರ್ಯಕರ್ತರ ಸಂವಾದ ಕಾರ್ಯಕ್ರಮವನ್ನೂ ನಿಭಾಯಿಸಲು ವಿಫಲರಾಗಿದ್ದಾರೆ. ಪೂರ್ವನಿರ್ಧರಿತ ಪ್ರಶ್ನೆ ಎಂಬುದು ಬಿಜೆಪಿಯ ಅದ್ಭುತ ಯೋಜನೆಯಾಗಿದೆ. ಇದಕ್ಕೆ ಪೂರ್ವನಿರ್ಧರಿತ ಉತ್ತರವನ್ನೂ ಪರಿಗಣಿಸಲಾಗುತ್ತಿದೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
‘ನಮೋ ಆ್ಯಪ್’ ಮೂಲಕ ಪ್ರಧಾನಿ ಮೋದಿ ಪಕ್ಷದ ಕಾರ್ಯಕರ್ತರೊಂದಿಗೆ ನಿಯಮಿತವಾಗಿ ವೀಡಿಯೊ ಸಂವಾದ ನಡೆಸುತ್ತಿದ್ದಾರೆ. ಡಿ.19ರಂದು ನಡೆದ ಕಾರ್ಯಕ್ರಮದಲ್ಲಿ ಚೆನ್ನೈಯ ಬಿಜೆಪಿ ಕಾರ್ಯಕರ್ತ ನಿರ್ಮಲ್ ಕುಮಾರ್ ಜೈನ್ ಎಂಬಾತ, ಕೇಂದ್ರ ಸರಕಾರ ಮಧ್ಯಮ ವರ್ಗದವರಿಂದ ವಿವಿಧ ತೆರಿಗೆಗಳನ್ನು ವಸೂಲಿ ಮಾಡುವಲ್ಲಿ ನಿರತವಾಗಿದೆ. ಆದರೆ ಮಧ್ಯಮ ವರ್ಗದವರಿಗೆ ಆದಾಯ ತೆರಿಗೆ ವಿನಾಯಿತಿ, ಅಥವಾ ಸಾಲ ಪಡೆಯಲು ನಿಯಮಗಳನ್ನು ಸರಳಗೊಳಿಸುವುದು ಮುಂತಾದ ಯಾವುದೇ ನೆರವು ನೀಡುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದ್ದ.
ಅಲ್ಲದೆ ಮಧ್ಯಮ ವರ್ಗದವರ ಬಗ್ಗೆ ಕಾಳಜಿ ವಹಿಸುವಂತೆ ಪ್ರಧಾನಿಯನ್ನು ಕೋರಿದ್ದ. ಇದಕ್ಕೆ ಉತ್ತರಿಸಿದ್ದ ಮೋದಿ ‘ಧನ್ಯವಾದಗಳು ನಿರ್ಮಲ್‌ಜಿ. ನೀವೊಬ್ಬ ವ್ಯಾಪಾರಿ. ಆದ್ದರಿಂದ ವ್ಯಾಪಾರದ ಬಗ್ಗೆ ನೀವು ಮಾತಾಡುವುದು ಸಹಜವಾಗಿದೆ. ಜನಸಾಮಾನ್ಯರ ಕಾಳಜಿ ವಹಿಸುವುದು ನನ್ನ ಆದ್ಯತೆಯಾಗಿದೆ ಮತ್ತು ಜನಸಾಮಾನ್ಯರು ನಮ್ಮ ಬಗ್ಗೆ ಕಾಳಜಿ ವಹಿಸುತ್ತಾರೆ ’ ಎಂದಿದ್ದರು. ಇದಾದ ತಕ್ಷಣ ಅವರು, ಇದೀಗ ಪುದುಚೇರಿಯತ್ತ ಸಾಗೋಣ ಎಂದು ಹೇಳಿ ‘ವಣಕ್ಕಂ ಪುದುಚೇರಿ(ಪುದುಚೇರಿಗೆ ನಮಸ್ಕಾರ) ಎಂದಿದ್ದರು. ಪಕ್ಷದ ಕಾರ್ಯಕರ್ತರ ಪ್ರಶ್ನೆಗೂ ಉತ್ತರಿಸದೆ ಪ್ರಧಾನಿ ಮೋದಿ ನುಣುಚಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.







