ಇಂದಿನಿಂದ ಬಾಕ್ಸಿಂಗ್ ಡೇ ಟೆಸ್ಟ್: ಭಾರತ-ಆಸ್ಟ್ರೇಲಿಯ ಹಣಾಹಣಿ
► ವಿಹಾರಿ-ಮಾಯಾಂಕ್‌ಗೆ ಇನಿಂಗ್ಸ್ ಆರಂಭಿಸುವ ಅವಕಾಶ ►ಆರಂಭಿಕರಾದ ರಾಹುಲ್-ವಿಜಯ್ ಕೈಬಿಟ್ಟ ಕೊಹ್ಲಿ ಪಡೆ

ಮೆಲ್ಬೋರ್ನ್, ಡಿ.25: ಭಾರತ ಹಾಗೂ ಆಸ್ಟ್ರೇಲಿಯ ಮಧ್ಯೆ ಮೂರನೇ ಟೆಸ್ಟ್ ಪಂದ್ಯ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (ಎಂಸಿಜಿ)ಬುಧವಾರ ಆರಂಭವಾಗಲಿದೆ. ಕ್ರಿಸ್‌ಮಸ್ ಮರುದಿನ ನಡೆಯುವ ಈ ಪಂದ್ಯ ‘ಬಾಕ್ಸಿಂಗ್ ಡೇ ಟೆಸ್ಟ್’ ಎಂದೇ ಪ್ರಸಿದ್ಧಿಯಾಗಿದೆ.
4 ಪಂದ್ಯಗಳ ಸರಣಿಯು 1-1 ರಿಂದ ಸಮಬಲಗೊಂಡಿರುವ ಹಿನ್ನೆಲೆಯಲ್ಲಿ ಉಭಯ ತಂಡಗಳಿಗೆ ಈ ಪಂದ್ಯ ಅತ್ಯಂತ ಮುಖ್ಯವಾಗಿದ್ದು, ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆನ್ನುವುದು ಐದು ದಿನಗಳ ಆಟದಲ್ಲಿ ಗೊತ್ತಾಗಲಿದೆ.
ಒಂದು ವೇಳೆ ಭಾರತ ಪರ್ತ್ ಟೆಸ್ಟ್ ಸೋಲಿನಿಂದ ಚೇತರಿಸಿಕೊಂಡು ಗೆಲುವು ಸಾಧಿಸಿದರೆ ಗವಾಸ್ಕರ್-ಬಾರ್ಡರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಲಿದೆ. ಆಸ್ಟ್ರೇಲಿಯ ಜಯ ದಾಖಲಿಸಿದರೆ, ವರ್ಷಾಂತ್ಯದಲ್ಲಿ ತಂಡದ ಅದೃಷ್ಟ ಬದಲಾಗಲಿದೆ. ಸರಣಿಯ 8 ಇನಿಂಗ್ಸ್‌ಗಳಲ್ಲಿ ಕೇವಲ 97 ರನ್ ಗಳಿಸಿರುವ ಖಾಯಂ ಆರಂಭಿಕ ಆಟಗಾರರಾದ ಕೆಎಲ್ ರಾಹುಲ್ ಹಾಗೂ ಮುರಳಿ ವಿಜಯ್‌ರನ್ನು ಭಾರತ ಕೈಬಿಟ್ಟಿದೆ. ಚೊಚ್ಚಲ ಪಂದ್ಯವನ್ನಾಡಲು ಸಜ್ಜಾಗಿರುವ ಕನ್ನಡಿಗ ಮಾಯಾಂಕ್ ಅಗರ್ವಾಲ್ ಹಾಗೂ 6ನೇ ಕ್ರಮಾಂಕದಲ್ಲಿ ಆಡುತ್ತಿದ್ದ ಆಲ್‌ರೌಂಡರ್ ಹನುಮ ವಿಹಾರಿಗೆ ಇನಿಂಗ್ಸ್ ಆರಂಭಿಸುವ ಹೊಣೆವಹಿಸುವ ಮೂಲಕ ಕೊಹ್ಲಿ ಪಡೆ ಹೊಸ ಪ್ರಯೋಗಕ್ಕೆ ಮುಂದಾಗಿದೆ. ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿದ್ದು 3ನೇ ಟೆಸ್ಟ್‌ಗೆ ಲಭ್ಯವಿರಲಿದ್ದಾರೆ. ಕಳೆದ ಕೆಲವು ಸಮಯದಿಂದ ಟೆಸ್ಟ್ ಕ್ಯಾಪ್ ಧರಿಸಲು ತುದಿಗಾಲಲ್ಲಿ ನಿಂತಿರುವ ಆಕ್ರಮಣಕಾರಿ ದಾಂಡಿಗ ಮಾಯಾಂಕ್ ಅಗರ್ವಾಲ್ ಅಂತಿಮ-11ರ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಎರಡನೇ ಟೆಸ್ಟ್‌ನಲ್ಲಿ 146 ರನ್‌ಗಳಿಂದ ಸೋತ ಬಳಿಕ ಒಂದು ವಾರ ವಿಶ್ರಾಂತಿ ಪಡೆದಿರುವ ಭಾರತ ಮತ್ತೊಂದು ಸವಾಲಿಗೆ ಸಜ್ಜಾಗಿದೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಮತ್ತೊಮ್ಮೆ ಫಿಟ್ ಆಗಿರುವ ರೋಹಿತ್ ಭಾರತದ ಬ್ಯಾಟಿಂಗ್ ಬಲ ಹೆಚ್ಚಿಸಲಿದ್ದಾರೆ. ಭಾರತ ಮಂಗಳವಾರವೇ 3ನೇ ಟೆಸ್ಟ್‌ಗೆ ಆಡುವ 11ರ ಬಳಗವನ್ನು ಘೋಷಿಸಿದೆ. ಸರಣಿಯ 4 ಇನಿಂಗ್ಸ್‌ಗಳಲ್ಲಿ ಕೇವಲ 48 ರನ್ ಗಳಿಸಿದ್ದ ರಾಹುಲ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ.
ದೇಶೀಯ ಕ್ರಿಕೆಟ್ ಹಾಗೂ ಭಾರತ ‘ಎ’ ತಂಡದ ಪರ ರನ್ ಹೊಳೆ ಹರಿಸಿರುವ ಕನ್ನಡಿಗ ಮಾಯಾಂಕ್ ಅಗರ್ವಾಲ್ ಅವರ ಟೆಸ್ಟ್ ಕ್ರಿಕೆಟ್ ಆಡುವ ಕನಸು ಈಡೇರುವ ಕಾಲ ಕೂಡಿಬಂದಿದೆ. ಆಂಧ್ರ ಪರ ಮೂರನೇ ಕ್ರಮಾಂಕದಲ್ಲಿ ಆಡಿದ್ದ ವಿಹಾರಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಹೈದರಾಬಾದ್ ಪರ ಇನಿಂಗ್ಸ್ ಆರಂಭಿಸಿದ ಅನುಭವವಿದೆ. ಪ್ರಸ್ತುತ ಸರಣಿಯ ಎರಡು ಪಂದ್ಯಗಳಲ್ಲಿ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಹಾಗೂ ಜೋಶ್ ಹೇಝಲ್‌ವುಡ್ ವಿರುದ್ಧ ದಿಟ್ಟ ಪ್ರದರ್ಶನ ನೀಡಿರುವ ವಿಹಾರಿ, ಟೀಮ್ ಮ್ಯಾನೇಜ್‌ಮೆಂಟ್ ಮೇಲೆ ಪರಿಣಾಮಬೀರಿದ್ದಾರೆ.
‘‘ಗಾಯಗೊಂಡು ಸರಣಿಯಿಂದ ಹೊರನಡೆದಿರುವ ಪೃಥ್ವಿ ಶಾರಿಂದ ತೆರವಾದ ಸ್ಥಾನ ತುಂಬಲು ವಿಹಾರಿ ಎದುರು ನೋಡುತ್ತಿದ್ದಾರೆ. ರವೀಂದ್ರ ಜಡೇಜ ಫಿಟ್‌ನೆಸ್ ವರದಿ ಕೈ ಸೇರಿದ್ದು, ಅವರು 3ನೇ ಪಂದ್ಯಕ್ಕೆ ಆಡಲು ಫಿಟ್ ಇದ್ದಾರೆ’’ ಎಂದು ಮೆಲ್ಬೋರ್ನ್‌ನಲ್ಲಿರುವ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಹೇಳಿದ್ದಾರೆ.
ಭಾರತ ಬೌಲಿಂಗ್ ದಾಳಿಯಲ್ಲಿ ಬದಲಾವಣೆ ಮಾಡುವ ಸಾಧ್ಯತೆಯಿದೆ. ಪರ್ತ್‌ನಲ್ಲಿ ನಾಲ್ವರು ವೇಗಿಗಳನ್ನು ಆಡಿಸಿ ಕೈಸುಟ್ಟುಕೊಂಡಿರುವ ಭಾರತ 3ನೇ ಟೆಸ್ಟ್‌ನಲ್ಲಿ ವೇಗಿಗಳಾದ ಇಶಾಂತ್ ಶರ್ಮಾ, ಮುಹಮ್ಮದ್ ಶಮಿ ಹಾಗೂ ಜಸ್‌ಪ್ರಿತ್ ಬುಮ್ರಾ ಜೊತೆಗೆ ಸ್ಪಿನ್ನರ್‌ನ್ನು ಸೇರ್ಪಡೆಗೊಳಿಸಲು ಚಿಂತಿಸುತ್ತಿದೆ. ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಭುಜನೋವಿನಿಂದ ಚೇತರಿಸಿಕೊಂಡಿದ್ದು, ಅಂತಿಮ-11ರ ಬಳಗದಲ್ಲಿ ಉಮೇಶ್ ಯಾದವ್‌ರಿಂದ ತೆರವಾದ ಸ್ಥಾನ ತುಂಬಲಿದ್ದಾರೆ.
ಆಫ್-ಸ್ಪಿನ್ನರ್ ಆರ್.ಅಶ್ವಿನ್ ಕಿಬ್ಬೊಟ್ಟೆಯ ನೋವಿನಿಂದ ಸಂಪೂರ್ಣ ಚೇತರಿಸಿಕೊಳ್ಳದ ಕಾರಣ 3ನೇ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ.
ಮತ್ತೊಂದೆಡೆ ಆಸ್ಟ್ರೇಲಿಯ ತಂಡ ಆಡುವ-11ರಲ್ಲಿ ಒಂದು ಬದಲಾವಣೆ ಮಾಡಲಿದೆ. ರನ್ ಬರ ಎದುರಿಸುತ್ತಿರುವ ಪೀಟರ್ ಹ್ಯಾಂಡ್ಸ್‌ಕಾಂಬ್ ಆಲ್‌ರೌಂಡರ್ ಮಿಚೆಲ್ ಮಾರ್ಷ್‌ಗೆ ದಾರಿ ಮಾಡಿ ಕೊಡಲಿದ್ದಾರೆ. ಎಂಸಿಜಿ ಪಿಚ್‌ಗುಣವನ್ನು ದೃಷ್ಟಿಯಲ್ಲಿಟ್ಟುಕೊಂಡು ಆತಿಥೇಯರು ಈ ಬದಲಾವಣೆ ಮಾಡಲು ನಿರ್ಧರಿಸಿದ್ದಾರೆ.
2017ರ ಡಿಸೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಪಂದ್ಯ ಡ್ರಾನಲ್ಲಿ ಕೊನೆಗೊಂಡಿದ್ದು, ಆಗ ಐಸಿಸಿ, ಎಂಸಿಜಿ ಪಿಚ್‌ಗೆ ಕಳಪೆ ರೇಟಿಂಗ್ ನೀಡಿತ್ತು.
ಬಾಕ್ಸಿಂಗ್ ಡೇ ಟೆಸ್ಟ್‌ಗೆ ಸಜ್ಜುಗೊಳಿಸಲಾಗಿರುವ ಪಿಚ್‌ನಲ್ಲಿ ಸ್ವಲ್ಪ ಹುಲ್ಲಿದೆ. ಉಭಯ ತಂಡಳ ಸದಸ್ಯರು ಪಿಚ್‌ನಲ್ಲಿ ಸ್ವಲ್ಪ ಒದ್ದೆಯಿರಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.
►ತಂಡಗಳು
ಭಾರತ: ವಿರಾಟ್ ಕೊಹ್ಲಿ(ನಾಯಕ), ಮಾಯಾಂಕ್ ಅಗರ್ವಾಲ್, ಹನುಮ ವಿಹಾರಿ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ರಿಷಭ್ ಪಂತ್(ವಿಕೆಟ್‌ಕೀಪರ್), ರವೀಂದ್ರ ಜಡೇಜ, ಇಶಾಂತ್ ಶರ್ಮಾ, ಜಸ್‌ಪ್ರಿತ್ ಬುಮ್ರಾ, ಮುಹಮ್ಮದ್ ಶಮಿ.
ಆಸ್ಟ್ರೇಲಿಯ: ಟಿಮ್ ಪೈನ್(ನಾಯಕ, ವಿಕೆಟ್‌ಕೀಪರ್), ಮಾರ್ಕಸ್ ಹ್ಯಾರಿಸ್, ಆ್ಯರೊನ್ ಫಿಂಚ್,ಉಸ್ಮಾನ್ ಖ್ವಾಜಾ, ಟ್ರಾವಿಸ್ ಹೆಡ್, ಶಾನ್ ಮಾರ್ಷ್,ಮಿಚೆಲ್ ಮಾರ್ಷ್,ನಥಾನ್ ಲಿಯೊನ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ಜೋಶ್ ಹೆಝಲ್‌ವುಡ್.
►ಪಂದ್ಯ ಆರಂಭದ ಸಮಯ: ಬೆಳಗ್ಗೆ 5:00
(ಭಾರತೀಯ ಕಾಲಮಾನ)







