ಶಿವಮೊಗ್ಗದಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ

ಶಿವಮೊಗ್ಗ, ಡಿ. 25: ಶಾಂತಿ-ಪ್ರೀತಿ, ಸರಳತೆ, ಸಹೋದರತ್ವ, ಪರೋಪಕಾರದ ಮಹತ್ವ ಸಾರುವ ಕ್ರಿಸ್ಮಸ್ ಹಬ್ಬವನ್ನು ಮಂಗಳವಾರ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕ್ರಿಶ್ಚಿಯನ್ ಸಮಾಜ ಬಾಂಧವರು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಿದರು.
ಶಿವಮೊಗ್ಗ ನಗರದ ಬಿ.ಹೆಚ್.ರಸ್ತೆಯಲ್ಲಿರುವ ಪವಿತ್ರ ಹೃದಯ ಪ್ರಧಾನಾಲಯ, ಶಿವಪ್ಪನಾಯಕ ಹೂವಿನ ಮಾರುಕಟ್ಟೆ ಬಳಿಯಿರುವ ಸಂತ ಥಾಮಸ್ ಚರ್ಚ್, ಶರಾವತಿ ನಗರದ ಏಸು ಬಾಲರ ಪುಣ್ಯಕ್ಷೇತ್ರ, ಭದ್ರಾವತಿ ನ್ಯೂ ಟೌನ್ನ ಅಮುಲೋದ್ಭವಿ ಮಾತೆಯ ದೇವಾಲಯ, 100 ವರ್ಷ ಇತಿಹಾಸವಿರುವ ಸಾಗರದ ಸಂತ ಜೋಸೆಫರ ದೇವಾಲಯ, ತೀರ್ಥಹಳ್ಳಿಯ ಸೇಂಟ್ ಫಿಲೋಮಿನಾ ಚರ್ಚ್, ಲೂಥರ್ ಮಾತೆಯ ಚರ್ಚ್, ಹೊಸನಗದ ಸೇಂಟ್ ಆಂಥೋನಿ ಚರ್ಚ್, ಶಿಕಾರಿಪುರದ ಪಿಎಸ್ಐ ಚರ್ಚ್, ಸೊರಬದ ಸಂತ ಸಬಾಸ್ಟಿಯನ್ ಚರ್ಚ್ ಸೇರಿದಂತೆ ಜಿಲ್ಲೆಯ ಎಲ್ಲ ಚರ್ಚ್ಗಳಲ್ಲಿಯೂ ವಿಶೇಷ ಪ್ರಾರ್ಥನೆ ಹಾಗೂ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.
ಚರ್ಚ್ಗಳ ಆವರಣದಲ್ಲಿ ನಿರ್ಮಿಸಲಾಗಿದ್ದ ವಿಶೇಷ ಗೋದಲಿಗಳು ಹಾಗೂ ನಕ್ಷತ್ರದ ಮಾದರಿಯ ಆಕೃತಿಗಳು ಸರ್ವರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು. ಗೋದಲಿಯಲ್ಲಿ ಬಾಲು ಯೇಸುವಿನ ಪ್ರತಿಮೆಯನ್ನಿರಿಸಲಾಗಿತ್ತು. ಭಕ್ತಿಭಾವದಿಂದ ಈ ಪ್ರತಿಮೆಗೆ ನಮಿಸುತ್ತಿದ್ದ ದೃಶ್ಯ ಕಂಡುಬಂದಿತು.
ಪ್ರಾರ್ಥನೆ: ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಚರ್ಚ್ಗಳನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು. ಹಲವೆಡೆ ಮಾಡಲಾಗಿದ್ದ ವರ್ಣರಂಜಿತ ದೀಪಾಲಾಂಕರದ ವ್ಯವಸ್ಥೆ ಮನಸೂರಗೊಂಡಿತು. ಬೆಳಿಗ್ಗೆಯಿಂದಲೇ ಚರ್ಚ್ಗೆ ಆಗಮಿಸುತ್ತಿದ್ದ ಕ್ರಿಶ್ಚಿಯನ್ ಬಾಂಧವರು, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮೇಣದ ಬತ್ತಿ ಹಚ್ಚಿ, ಇಷ್ಟಾರ್ಥ ಈಡೇರಿಸುವಂತೆ ಭಗವಂತನಲ್ಲಿ ಪ್ರಾರ್ಥಿಸಿದರು. ತದನಂತರ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಹಬ್ಬದ ಅಂಗವಾಗಿ ಕ್ರೈಸ್ತ ಬಾಂಧವರು ತಮ್ಮ ಮನೆಗಳಲ್ಲಿ ಬಗೆಗೆಯ ತಿಂಡಿ-ತಿನಿಸು, ಕೇಕ್ ಗಳನ್ನು ಸಿದ್ದಪಡಿಸಿದ್ದರು. ಬಂಧು-ಬಾಂಧವರು, ನೆರೆಹೊರೆ, ಇತರೆ ಧರ್ಮೀಯರನ್ನು ತಮ್ಮ ಮನೆಗಳಿಗೆ ಆಹ್ವಾನಿಸಿ ಹಬ್ಬದ ಭೋಜನ ಸವಿಯುತ್ತಿದ್ದ ದೃಶ್ಯ ಕಂಡುಬಂದಿತು.
ಆಕರ್ಷಣೆ: ಮಹಾನ್ ಮಾನವತವಾದಿ ಯೇಸು ಜನ್ಮ ದಿನವನ್ನು ಕ್ರಿಶ್ಚಿಯನ್ನರು ವಿಶ್ವಾದ್ಯಂತ ಕ್ರಿಸ್ಮಸ್ ಹಬ್ಬವಾಗಿ ಆಚರಿಸುತ್ತಾರೆ. ದನದ ಕೊಟ್ಟಿಗೆಯಲ್ಲಿ ಯೇಸುಗೆ ಜನ್ಮವಿತ್ತ ಕಾರಣದಿಂದ ಕ್ರಿಸ್ಮಸ್ ಹಬ್ಬದಂದು ಚರ್ಚಗಳಲ್ಲಿ ಹಾಗೂ ಕ್ರೈಸ್ತ ಬಾಂಧವರ ಮನೆಗಳಲ್ಲಿ ವಿಶೇಷ ಗೋದಲಿಗಳನ್ನು ನಿರ್ಮಿಸಲಾಗಿರುತ್ತದೆ. ಗೋದಲಿಯಲ್ಲಿ ಬಾಲ ಯೇಸುವನ್ನಿಟ್ಟು ಪೂಜಿಸಲಾಗುತ್ತದೆ. ಯೇಸು ಹುಟ್ಟಿದಾಗ ಕುರಿ ಕಾಯುವವರಿಗೆ ಆಗಸದಲ್ಲಿ ಬೆಳಕು ಕಾಣಿಸಿತ್ತು. ನಕ್ಷತ್ರದ ಆ ಬೆಳಕಲ್ಲಿ ದೇವಧೂತರು ಕಾಣಿಸಿಕೊಂಡು, ಯೇಸು ಜನಿಸಿದ ಸಂದೇಶ ನೀಡಿದ್ದರು. ಹಾಗಾಗಿ ಕ್ರಿಸ್ಮಸ್ ದಿನದ ಎಲ್ಲೆಡೆ ನಕ್ಷತ್ರದ ಮಾದರಿಯನ್ನು ತೂಗು ಹಾಕಲಾಗುತ್ತದೆ.







