2018: ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನ ದಾಖಲೆವೀರರು

ಹೊಸದಿಲ್ಲಿ, ಡಿ.24: 2018ರ ವರ್ಷ ಕೊನೆಗೊಳ್ಳುತ್ತಾ ಬಂದಿದ್ದು, ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸುದ್ದಿ ಮಾಡಿರುವ ಹಾಗೂ ದಾಖಲೆ ನಿರ್ಮಿಸಿದ ಆಟಗಾರರ ಕುರಿತು ಸಂಕ್ಷಿಪ್ತ ಅವಲೋಕನ.
►ಟೆಸ್ಟ್, ಏಕದಿನ ಹಾಗೂ ಟ್ವೆಂಟಿ-20ಯಲ್ಲಿ ಗರಿಷ್ಠ ರನ್ ಗಳಿಸಿದವರು.
(ಎಲ್ಲ ಅಂಕಿ-ಅಂಶ ಡಿ.24ರ ತನಕ ಅಪ್‌ಡೇಟ್ ಆಗಿದೆ)
►ಟೆಸ್ಟ್: ಭಾರತದ ನಾಯಕ ವಿರಾಟ್ ಕೊಹ್ಲಿ ಕ್ಯಾಲೆಂಡರ್ ವರ್ಷದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಈ ವರ್ಷದ ಜನವರಿಯಲ್ಲಿ ದ.ಆಫ್ರಿಕ ವಿರುದ್ಧ ಕೇಪ್‌ಟೌನ್ ಟೆಸ್ಟ್ ನಿಂದ ಆರಂಭಿಸಿ ಆಸೀಸ್ ವಿರುದ್ಧ ಇತ್ತೀಚೆಗೆ ನಡೆದ ಪರ್ತ್ ಟೆಸ್ಟ್ ತನಕ ಕೊಹ್ಲಿ ತಾನಾಡಿರುವ 12 ಪಂದ್ಯಗಳ ಪೈಕಿ ಒಟ್ಟು 1,240 ರನ್ ಗಳಿಸಿದ್ದಾರೆ. ಬೇರ್ಯಾವ ಆಟಗಾರನೂ 1,000 ರನ್ ದಾಟಿಲ್ಲ.
►ಏಕದಿನ: ಕ್ಯಾಲೆಂಡರ್ ವರ್ಷದಲ್ಲಿ ಮೂವರು ದಾಂಡಿಗರು 1,000ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಭಾರತದ ನಾಯಕ ವಿರಾಟ್ ಕೊಹ್ಲಿ ಏಶ್ಯಕಪ್ ಟೂರ್ನಿಯಿಂದ ಹೊರಗುಳಿದಿದ್ದರೂ 14 ಪಂದ್ಯಗಳಲ್ಲಿ 1,202 ರನ್ ಗಳಿಸಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋವ್(22 ಪಂದ್ಯ, 1,025ರನ್)ಹಾಗೂ ಭಾರತದ ರೋಹಿತ್ ಶರ್ಮಾ(19 ಪಂದ್ಯ,1,030 ರನ್)ಈ ವರ್ಷದ ಸಾವಿರ ರನ್ ಸರದಾರರಾಗಿದ್ದಾರೆ.
►ಟ್ವೆಂಟಿ-20: ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಈ ವರ್ಷ ಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಕಲೆಹಾಕಿದ್ದಾರೆ. ಎಡಗೈ ದಾಂಡಿಗ 18 ಪಂದ್ಯಗಳಲ್ಲಿ 40.52ರ ಸರಾಸರಿಯಲ್ಲಿ 689 ರನ್ ಗಳಿಸಿದ್ದಾರೆ. ಇದರಲ್ಲಿ 6 ಅರ್ಧಶತಕವಿದ್ದು, ಗರಿಷ್ಠ ಸ್ಕೋರ್ 92.

►ಟೆಸ್ಟ್, ಏಕದಿನ, ಟಿ-20ಯಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್: ಟೆಸ್ಟ್: ಕ್ಯಾಲೆಂಡರ್ ವರ್ಷದಲ್ಲಿ ಕೇವಲ ಎರಡು ದ್ವಿಶತಕ ದಾಖಲಾಗಿವೆ. ಬಾಂಗ್ಲಾದೇಶದ ಮುಶ್ಫಿಕುರ್ರಹೀಂ(ಔಟಾಗದೆ 219) ಈ ಸಾಧನೆ ಮಾಡಿದ ಮೊದಲಿಗ. ನವೆಂಬರ್‌ನಲ್ಲಿ ಝಿಂಬಾಬ್ವೆ ವಿರುದ್ಧ ಈ ಸಾಧನೆ ಮಾಡಿದ್ದರು. ನ್ಯೂಝಿಲೆಂಡ್‌ನ ಆರಂಭಿಕ ಆಟಗಾರ ಟಾಮ್ ಲಥಮ್ ಶ್ರೀಲಂಕಾ ವಿರುದ್ಧ ಡಿಸೆಂಬರ್‌ನಲ್ಲಿ ವೆಲ್ಲಿಂಗ್ಟನ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಔಟಾಗದೆ 264 ರನ್ ಗಳಿಸಿದ್ದರು.
►ಏಕದಿನ: ಪಾಕಿಸ್ತಾನದ ಫಾಕರ್ ಝಮಾನ್ ಬುಲಾವಯೊದಲ್ಲಿ ಜು.20,2018ರಲ್ಲಿ ಝಿಂಬಾಬ್ವೆ ವಿರುದ್ಧ 4ನೇ ಏಕದಿನದಲ್ಲಿ ಔಟಾಗದೆ 210 ರನ್ ಗಳಿಸಿ ದಾಖಲೆ ಪುಸ್ತಕಕ್ಕೆ ತನ್ನ ಹೆಸರನ್ನು ಸೇರಿಸಿದ್ದಾರೆ. ಎಡಗೈ ಆರಂಭಿಕ ಆಟಗಾರ ಝಮಾನ್ ಏಕದಿನದಲ್ಲಿ ದ್ವಿಶತಕ ಸಿಡಿಸಿದ ವಿಶ್ವದ 6ನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು.

►ಟಿ-20: ಆಸ್ಟ್ರೇಲಿಯದ ಆರಂಭಿಕ ಆಟಗಾರ ಆ್ಯರೊನ್ ಫಿಂಚ್ 2018ರ ಜು.3 ರಂದು ಹರಾರೆಯಲ್ಲಿ ಝಿಂಬಾಬ್ವೆ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿ 172 ರನ್ ಗಳಿಸಿದ್ದರು. ಕೇವಲ 76 ಎಸೆತಗಳಲ್ಲಿ 10 ಸಿಕ್ಸರ್, 16 ಬೌಂಡರಿ ಚಚ್ಚಿದ್ದರು. ಫಿಂಚ್ ಅವರ 172 ರನ್ ಟಿ-20 ಕ್ರಿಕೆಟ್‌ನ ಗರಿಷ್ಠ ಸ್ಕೋರ್ ಎನಿಸಿಕೊಂಡಿದೆ. ಫಿಂಚ್ 5 ವರ್ಷಗಳ ಹಿಂದೆ ಇಂಗ್ಲೆಂಡ್ ವಿರುದ್ಧ ನಿರ್ಮಿಸಿದ್ದ ತನ್ನದೇ ದಾಖಲೆಯನ್ನು ಮುರಿದು ಮುನ್ನುಗ್ಗಿದ್ದರು.
►ಟೆಸ್ಟ್, ಏಕದಿನ, ಟಿ20ಗಳಲ್ಲಿ ಅತ್ಯಧಿಕ ಶತಕ
ಟೆಸ್ಟ್: 12 ಟೆಸ್ಟ್ ಪಂದ್ಯಗಳಲ್ಲಿ 5 ಶತಕಗಳೊಂದಿಗೆ ಭಾರತ ತಂಡದ ನಾಯಕ ಕೊಹ್ಲಿ ಈ ವಿಭಾಗದಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ.
►ಏಕದಿನ: ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನ ಏಕದಿನ ವಿಭಾಗದಲ್ಲೂ ಕೊಹ್ಲಿಯೇ ಕಿಂಗ್ ಆಗಿದ್ದಾರೆ. ಈ ವರ್ಷ ಆಡಿರುವ 14 ಪಂದ್ಯಗಳಿಂದ ಅವರು 6 ಶತಕಗಳನ್ನು ಗಳಿಸಿದ್ದಾರೆ.
►ಟಿ20: ಈ ವಿಭಾಗದಲ್ಲಿ ರೋಹಿತ್ ಶರ್ಮಾ ಹೊರತುಪಡಿಸಿ ಯಾವ ಪಟ್ಟಿಯೂ ಪೂರ್ಣವಾಗುವುದಿಲ್ಲ. ಅವರು ಈ ವರ್ಷ ಎರಡು ಅಮೋಘ ಶತಕಗಳನ್ನು ಬಾರಿಸಿದ್ದಾರೆ. ಒಂದು ಶತಕ ಇಂಗ್ಲೆಂಡ್ ವಿರುದ್ಧ ಹೊರಹೊಮ್ಮಿದರೆ ,ಮತ್ತೊಂದು ವೆಸ್ಟ್ ಇಂಡೀಸ್ ವಿರುದ್ಧ ಮೂಡಿಬಂದಿತ್ತು.
ಅತೀ ಹೆಚ್ಚು ವಿಕೆಟ್ ಗಳಿಕೆ

►ಟೆಸ್ಟ್: ಶ್ರೀಲಂಕಾದ ಆಫ್-ಸ್ಪಿನ್ನರ್ ದಿಲ್ರುವಾನ್ ಪೆರೇರ ಹಾಗೂ ಆಸೀಸ್‌ನ ನಥಾನ್ ಲಿಯೊನ್ ತಲಾ 48 ವಿಕೆಟ್ ಪಡೆದಿದ್ದಾರೆ. 10 ಟೆಸ್ಟ್ ಗಳಿಂದ ದಿಲ್ರುವಾನ್ ಈ ಸಾಧನೆಗೈದರೆ, 9 ಪಂದ್ಯಗಳಿಂದ ಲಿಯೊನ್ ಈ ಸಾಧನೆಗೆ ಪಾತ್ರರಾಗಿದ್ದಾರೆ.
►ಏಕದಿನ: ಅಫ್ಘಾನಿಸ್ತಾನದ ಬೌಲಿಂಗ್ ತಾರೆ ರಶೀದ್ ಖಾನ್ ಈ ವಿಭಾಗದ ಅಗ್ರಸ್ಥಾನಿಯಾಗಿದ್ದಾರೆ. ಅವರು 20 ಪಂದ್ಯಗಳನ್ನು ಆಡಿ 48 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
►ಟಿ20: ಆಸ್ಟ್ರೇಲಿಯದ ಮಧ್ಯಮ ವೇಗದ ಬೌಲರ್ ಆ್ಯಂಡ್ರೂ ಟೈ 19 ಪಂದ್ಯಗಳಿಂದ 31 ವಿಕೆಟ್ ಕಬಳಿಸಿ ಈ ವಿಭಾಗದಲ್ಲಿ ಮುನ್ನಡೆಯಲ್ಲಿದ್ದಾರೆ.
ಪಂದ್ಯವೊಂದರಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ

►ಟೆಸ್ಟ್: ದಕ್ಷಿಣ ಆಫ್ರಿಕದ ಎಡಗೈ ಸ್ಪಿನ್ನರ್ ಕೇಶವ್ ಮಹಾರಾಜ್ ಶ್ರೀಲಂಕಾದ ವಿರುದ್ಧದ ಪಂದ್ಯದಲ್ಲಿ 129 ರನ್ ನೀಡಿ 9 ವಿಕೆಟ್ ಪಡೆಯುವ ಮೂಲಕ ಈ ವಿಭಾಗದಲ್ಲಿ ಅಗ್ರಸ್ಥಾನಿಯಾಗಿದ್ದಾರೆ.
►ಏಕದಿನ: ದಕ್ಷಿಣ ಆಫ್ರಿಕದ ಇಮ್ರಾನ್ ತಾಹಿರ್, ಭಾರತದ ಕುಲದೀಪ್ ಯಾದವ್ ಹಾಗೂ ಲಂಕಾದ ಅಖಿಲ ಧನಂಜಯ ತಲಾ 6 ವಿಕೆಟ್ ಪಡೆದಿದ್ದಾರೆ. ಆದರೆ ಕಡಿಮೆ ರನ್ ವ್ಯಯಿಸಿ ವಿಕೆಟ್ ಪಡೆದಿರುವ(24ಕ್ಕೆ6) ಸಾಧನೆ ತಾಹಿರ್ ಅವರ ಹೆಸರಿನಲ್ಲಿದೆ.

►20: ವೆಸ್ಟ್ ಇಂಡೀಸ್‌ನ ಕೀಮೊ ಪೌಲ್, ಬಾಂಗ್ಲಾದೇಶದ ಶಾಕಿಬ್ ಹಸನ್ ಹಾಗೂ ದ.ಆಫ್ರಿಕದ ಇಮ್ರಾನ್ ತಾಹಿರ್, ಭಾರತದ ಭುವನೇಶ್ವರ ಕುಮಾರ್ ಹಾಗೂ ಕುಲದೀಪ್ ಯಾದವ್ 5 ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ. ಆದರೆ ವಿಂಡೀಸ್‌ನ ಕೀಮೊ ಪೌಲ್‌ರ (15ಕ್ಕೆ5) ಸಾಧನೆ ಅಗ್ರಸ್ಥಾನದಲ್ಲಿದೆ.







