ಭಾರತ ಫುಟ್ಬಾಲ್ ತಂಡದ ಕೈಗೆ ಸಿಗದ ಕಿಟ್ ಸೆಟ್!
ಹೊಸದಿಲ್ಲಿ, ಡಿ.25: ಯುಎಇನಲ್ಲಿ ನಡೆಯುವ ಮುಂಬರುವ ಎಎಫ್‌ಸಿ ಏಶ್ಯ ಕಪ್‌ಗೆ ಪೂರ್ವ ತಯಾರಿ ಭಾಗವಾಗಿ ಭಾರತೀಯ ಫುಟ್ಬಾಲ್ ತಂಡ ಒಮಾನ್ ವಿರುದ್ಧ ಗುರುವಾರ ಅಂತರ್‌ರಾಷ್ಟ್ರೀಯ ಸೌಹಾರ್ದ ಪಂದ್ಯವನ್ನಾಡಬೇಕಾಗಿದೆ. ಆದರೆ, ಸುನೀಲ್ ಚೆಟ್ರಿ ಬಳಗಕ್ಕೆ ಪ್ರಾಕ್ಟೀಸ್ ಕಿಟ್ ಹಾಗೂ ತಂಡದ ಜೆರ್ಸಿ ಸಹಿತ ಅಧಿಕೃತ ಕಿಟ್ ಸೆಟ್ ಇನ್ನೂ ಕೈ ಸೇರಿಲ್ಲ.
ಅಖಿಲ ಭಾರತ ಫುಟ್ಬಾಲ್ ಒಕ್ಕೂಟ ಅಧಿಕೃತ ಕಿಟ್ ಪ್ರಾಯೋಜಕ ಸಂಸ್ಥೆ ನೈಕ್ ಬದಲಿಗೆ ಗುರ್ಗಾಂವ್ ಮೂಲದ ಕ್ರೀಡಾಉಡುಪು ತಯಾರಕ ಸಂಸ್ಥೆಯೊಂದಿಗೆ 8 ರಿಂದ 10 ಕೋ.ರೂ.ಗೆ ಒಪ್ಪಂದ ಮಾಡಿಕೊಂಡಿದೆ. ಗುರ್ಗಾಂವ್ ಕಂಪೆನಿ ಸೂಕ್ತ ಸಮಯಕ್ಕೆ ಕಿಟ್‌ನ್ನು ಪೂರೈಸಿಲ್ಲ.
ಪರಿಣಾಮವಾಗಿ ಡಿ.20 ರಂದು ಅಬುಧಾಬಿಗೆ ತೆರಳಿರುವ 28 ಸದಸ್ಯರನ್ನು ಒಳಗೊಂಡ ಭಾರತ ಫುಟ್ಬಾಲ್ ತಂಡ ನೈಕ್ ಕಂಪೆನಿ ತಯಾರಿಸಿರುವ ಹಳೆಯ ಟ್ರೈನಿಂಗ್ ಕಿಟ್ ಧರಿಸಿ ಅಭ್ಯಾಸ ನಡೆಸುತ್ತಿದೆ.
ಎಎಫ್‌ಸಿ ಕಪ್‌ನಲ್ಲಿ ಭಾಗವಹಿಸಲು ಅಬುಧಾಬಿ ತಲುಪಿದ ಮೊದಲ ತಂಡ ಎನಿಸಿಕೊಂಡಿರುವ ಭಾರತ , ಒಮಾನ್ ವಿರುದ್ಧ ಆಡುವ ಮೊದಲು ಡಿ.30 ರಂದು ಸ್ಥಳೀಯ ಕ್ಲಬ್‌ನೊಂದಿಗೆ ಆಡಲಿದೆ. ಟೂರ್ನಮೆಂಟ್ ಆರಂಭಕ್ಕೆ ಮೊದಲು ಆಟಗಾರರು ನೂತನ ಜೆರ್ಸಿ ಧರಿಸುವುದು ಅತ್ಯಂತ ಮುಖ್ಯವಾಗಿದೆ. ಪ್ರಾಕ್ಟೀಸ್ ಕಿಟ್ ಯುಎಇಗೆ ಹಂತಹಂತವಾಗಿ ತಲುಪುತ್ತಿದೆ. ಕೆಲವು ಜೆರ್ಸಿಗಳ ಅಳತೆ ಸರಿಯಾಗಿಲ್ಲ. ಕೆಲವು ಜೆರ್ಸಿಗಳಲ್ಲಿ ಒಂದೇ ಸಂಖ್ಯೆಗಳಿವೆ. ಇದರಿಂದ ಮುಖ್ಯ ಕೋಚ್ ಸ್ಟೀಫನ್ ಕಾನ್‌ಸ್ಟನ್‌ಟೈನ್ ಆಕ್ರೋಶಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.







