ಪ್ರಧಾನಿ ನರೇಂದ್ರ ಮೋದಿ ವಚನ ಭ್ರಷ್ಟ: ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್

ಚಿಕ್ಕಮಗಳೂರು, ಡಿ.25: ನೂತನವಾಗಿ ನೇಮಕವಾಗಿರುವ ರಾಜ್ಯ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಅವರು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮಂಗಳವಾರ ಭೇಟಿ ನೀಡಿ ಕಾರ್ಯಕರ್ತರೋಡನೆ ಮಾತನಾಡಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವನಮಾಲ ದೇವರಾಜ್ ಹಾಗೂ ಜಿಲ್ಲಾಧ್ಯಕ್ಷ ಡಿ.ಎಲ್. ವಿಜಯಕುಮಾರ್ ನೂತನ ಮಹಿಳಾಧ್ಯಕ್ಷರಿಗೆ ಕಾಂಗ್ರೆಸ್ ಪಕ್ಷದ ಶಾಲು ಹಾಕಿ ಜಿಲ್ಲೆಗೆ ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಡಾ.ಪುಷ್ಪಾ ಅಮರನಾಥ್, ಮುಂಬರುವ ಲೋಕಸಭೆ ಹಾಗೂ ನಗರಸಭೆ ಚುನಾವಣೆಗೆ ಪಕ್ಷ ಸಂಘಟನೆಯನ್ನು ಚುರುಕುಗೊಳಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ನಮ್ಮ ಪಕ್ಷದ ಮಹಿಳಾ ಮಣಿಗಳನ್ನು ನಾವು ಬೂತ್ ಮಟದಲ್ಲಿ ಸಕ್ರೀಯಗೊಳಿಸಬೇಕೆಂದು ತಿಳಿಸಿದ ಅವರು, ಪಕ್ಷದಲ್ಲಿ ನೂತನವಾಗಿ ಆಯೋಜಿಸಿರುವ ಶಕ್ತಿ ಕಾರ್ಯಕ್ರಮ, ಕಾಂಗ್ರೆಸ್‍ಗೆ ಶಕ್ತಿ ತಂದುಕೊಡುವ ಪ್ರತಿಯೊಬ್ಬ ಕಾಂಗ್ರೆಸಿಗರ ಧ್ವನಿಯಾಗಿದೆ. ಇದಕ್ಕೆ ಹೆಚ್ಚು ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ನೋಂದಾಯಿಸುವುದರ ಮೂಲಕ ಕಾಂಗ್ರೆಸ್‍ಗೆ ಇನ್ನಷ್ಟು ಶಕ್ತಿ ತುಂಬಿಕೊಡಬೇಕೆಂದರು.
ಕೇಂದ್ರ ಸರಕಾರ ಅಧಿಕಾರಕ್ಕೆ ಬರುವ ಮೊದಲು ಸ್ವರ್ಗವನ್ನೆ ಧರೆಗಿಳಿಸುತ್ತೇವೆ ಎಂದು ದೇಶದ ಜನರಿಗೆ ಭರವಸೆ ನೀಡಿದ್ದರು. ಬಿಜೆಪಿ ಹಾಗೂ ಅದರ ಮುಖಂಡ ಪ್ರಧಾನಿ ನರೇಂದ್ರ ಮೋದಿ ವಚನ ಭ್ರಷ್ಟರಾಗಿದ್ದು, ಅವರನ್ನು ಅಧಿಕಾರದಿಂದ ತೊಲಗಿಸಿ ರಾಹುಲ್ ಗಾಂಧಿರವರನ್ನು ಪ್ರಧಾನಿಯಾಗಿ ಮಾಡಬೇಕೆಂದ ಅವರು, 2014ರಲ್ಲಿ ಅವರು ಅಧಿಕಾರ ಹಿಡಿಯುವ ಮುನ್ನ ಸ್ವಿಸ್ ಬ್ಯಾಂಕಿನಲ್ಲಿ ಇರುವ ಹಣವನ್ನು ತಂದು ಈ ದೇಶದ ಜನರ ಖಾತೆಗಳಿಗೆ ತುಂಬುವೆ ಎಂಬ ಮೋದಿ ಮಾತು ಎಲ್ಲಿಗೆ ಹೋಯಿತು. ಸ್ವಿಸ್ ಬ್ಯಾಂಕಿನಿಂದ ಹಣ ತರುವುದಿರಲಿ ಇವರ ಆಡಳಿತದಲ್ಲಿ ಹಿಂದಿಗಿಂತಲೂ ಹೆಚ್ಚು ಹಣ ಸ್ವಿಸ್ ಬ್ಯಾಂಕಿಗೆ ಜಮೆ ಆಗಿದ್ದು ದುರ್ದೈವ ಮತ್ತು ಇವರ ಆಡಳಿತಕ್ಕೆ ಹಿಡಿದ ಕನ್ನಡಿ ಎಂದರು. ರೂ.25 ಕ್ಕೆ ಒಂದು ಲೀಟರ್ ಪೆಟ್ರೋಲ್ ನೀಡುತ್ತೇವೆ ಎಂದಿದ್ದ ಅವರ ಮಾತಿಗೆ ಅವರೇ ಉತ್ತರಿಸಬೇಕು ಎನ್ನುತ್ತಾ ಇಂದು ಪೆಟ್ರೋಲ್, ಡಿಸೇಲ್ ಮತ್ತು ಗ್ಯಾಸ್ ಸಿಲಿಂಡರ್ ದರಗಳು ಗಗನಕ್ಕೇರುತ್ತಿರುವುದು ಮತ್ತು ಈ ವಿಚಾರವಾಗಿ ಬಿಜೆಪಿ ಪಕ್ಷ ಚಕಾರವೆತ್ತದಿರುವುದು ಆ ಪಕ್ಷದವರ ಜನವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ. ಇದನ್ನು ಕಾಂಗ್ರೆಸ್‍ನವರಷ್ಟೆ ಅಲ್ಲ, ಈ ದೇಶದ ಸಾಮಾನ್ಯ ಜನ ಕೂಡ ಪ್ರತಿಭಟಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ವನಮಾಲ ದೇವರಾಜ್ ಮಾತನಾಡಿ, ಮುಂಬರುವ ನಗರಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಅಭ್ಯರ್ಥಿಗಳ ಅರ್ಹತೆ ಹಾಗು ಆರ್ಥಿಕ ವ್ಯವಸ್ಥೆಗಳನ್ನು ನೋಡಿ ಟಿಕೆಟ್ ನೀಡಬೇಕೆಂದು ಜಿಲ್ಲಾಧ್ಯಕ್ಷರಿಗೆ ಮನವಿ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸ್ವಪ್ನ ಹರೀಶ್, ರಾಜ್ಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ನಗೀನ ಅನ್ವರ್ ಹಾಗೂ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಬ್ಲಾಕ್ ಅಧ್ಯಕ್ಷರುಗಳಾದ ಯಶೋಧ, ಜಯಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಗಾಯತ್ರಿ, ಉಪಾಧ್ಯಕ್ಷೆ ವಸಂತ ಸೌಮ್ಯಗೌಡ, ತಾಲೂಕು ಪಂಚಾಯತ್ ಅಧ್ಯಕ್ಷೆ ಭಾರತಿ, ಕಲ್ಪನಾ, ಚೇತನಾ ಮತ್ತಿತರರು ಉಪಸ್ಥಿತರಿದ್ದರು.







