ಕೆನಡಾ ಪೌರತ್ವ ಪಡೆದ ಭಾರತೀಯರ ಸಂಖ್ಯೆ ಈ ವರ್ಷ ಶೇ.50ರಷ್ಟು ಏರಿಕೆ
![ಕೆನಡಾ ಪೌರತ್ವ ಪಡೆದ ಭಾರತೀಯರ ಸಂಖ್ಯೆ ಈ ವರ್ಷ ಶೇ.50ರಷ್ಟು ಏರಿಕೆ ಕೆನಡಾ ಪೌರತ್ವ ಪಡೆದ ಭಾರತೀಯರ ಸಂಖ್ಯೆ ಈ ವರ್ಷ ಶೇ.50ರಷ್ಟು ಏರಿಕೆ](https://www.varthabharati.in/sites/default/files/images/articles/2018/12/26/169760.jpg)
ಹೊಸದಿಲ್ಲಿ, ಡಿ.26: ಕೆನಡಾದಲ್ಲಿ ವಾಸಿಸುತ್ತಿರುವ ಹಾಗೂ ಅಲ್ಲಿನ ಪೌರತ್ವ ಪಡೆದಿರುವ ಭಾರತೀಯರ ಸಂಖ್ಯೆ ಈ ವರ್ಷ ಶೇ.50ರಷ್ಟು ಏರಿಕೆ ಕಂಡಿದೆ. ಅಕ್ಟೋಬರ್ 2018ಕ್ಕೆ ಅಂತ್ಯಗೊಂಡ ಹತ್ತು ತಿಂಗಳ ಅವಧಿಯಲ್ಲಿ 15,016 ಭಾರತೀಯರು ಕೆನಡಾ ಪೌರತ್ವ ಪಡೆದಿದ್ದಾರೆ.
ಕಳೆದ ವರ್ಷದ ಇದೇ ಅವಧಿಯಲ್ಲಿ 9,992 ಭಾರತೀಯರು ಕೆನಡಾದ ಪೌರತ್ವ ಪಡೆದಿದ್ದರು. ಈ ಬಾರಿ ಫಿಲಿಪ್ಪೀನ್ಸ್ ದೇಶದ 15,462 ಖಾಯಂ ನಿವಾಸಿಗಳು ಕೆನಡಾ ಪೌರತ್ವ ಪಡೆದಿದ್ದಾರೆ. ಈ ವರ್ಷದ ಜನವರಿಯಿಂದ ಅಕ್ಟೋಬರ್ ತನಕ 1.39 ಲಕ್ಷ ಖಾಯಂ ನಾಗರಿಕರು ಕೆನಡಾ ಪೌರತ್ವ ಪಡೆದಿದ್ದು ಅವರಲ್ಲಿ ಶೇ. 10.7ರಷ್ಟು ಮಂದಿ ಭಾರತೀಯರಾಗಿದ್ದಾರೆ.
ಕೆನಡಾದ ನಿಯಮಗಳ ಪ್ರಕಾರ ಯಾವುದೇ ದೇಶದವರು ಅಲ್ಲಿ ಕನಿಷ್ಠ ಮೂರು ವರ್ಷ ಖಾಯಂ ನಿವಾಸಿಗಳಾಗಿದ್ದಲ್ಲಿ ಮಾತ್ರ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಖಾಯಂ ನಾಗರಿಕರು ದೇಶದಲ್ಲಿ ನೆಲೆಸಿ ಉದ್ಯೋಗದಲ್ಲಿರಬಹುದಾದರೂ ಅವರು ಅಲ್ಲಿ ಮತ ಚಲಾಯಿಸುವಂತಿಲ್ಲ ಅಥವಾ ರಾಜಕೀಯ ಹುದ್ದೆಗಳನ್ನು ಹೊಂದುವಂತಿಲ್ಲ. ಕಳೆದ ವರ್ಷ ಗರಿಷ್ಠ ಸಂಖ್ಯೆಯ ಭಾರತೀಯರು (51,651) ಕೆನಡಾದ ಖಾಯಂ ನಿವಾಸಿಗಳಾಗಿದ್ದರು. ಇದೇ ವರ್ಷದಲ್ಲಿ ಫಿಲಿಪ್ಪೀನ್ಸ್ ದೇಶದ 40,857 ನಾಗರಿಕರು ಹಾಗೂ ಚೀನಾದ 30,270 ನಾಗರಿಕರು ಅಲ್ಲಿನ ಖಾಯಂ ನಿವಾಸಿಗಳಾಗಿದ್ದರು.