ತುಮಕೂರು: ಗಂಗಸಂದ್ರ ಸ್ಮಶಾನದಲ್ಲಿ ಸೂಲಗಿತ್ತಿ ನರಸಮ್ಮ ಅಂತ್ಯಕ್ರಿಯೆ
ಗಾಜಿನ ಮನೆಯಲ್ಲಿ ಅಂತಿಮ ದರ್ಶನ ಪಡೆದ ಗಣ್ಯರು

ತುಮಕೂರು,ಡಿ.26: ಮಂಗಳವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಪದ್ಮಶ್ರೀ ಡಾ.ಸೂಲಗಿತ್ತಿ ನರಸಮ್ಮ(95)ಅವರ ಮೃತದೇಹದ ಅಂತಿಮ ದರ್ಶನಕ್ಕೆ ನಗರದ ಅಮಾನಿಕೆರೆಯಲ್ಲಿ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ್ದು, ಮಂತ್ರಿಗಳು, ಶಾಸಕರು, ಸಂಸದರು, ಮಠಾಧೀಶರು, ಗಣ್ಯರು ಅಗಮಿಸಿ ಅಂತಿಮ ನಮನ ಸಲ್ಲಿಸಿದರು.
ಬೆಂಗಳೂರಿನ ಬಿಜಿಎಸ್ ಅಸ್ಪತ್ರೆಯಿಂದ ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ಅಮಾನೀಕೆರೆಯಲ್ಲಿರುವ ಗಾಜಿನ ಮನೆಯಲ್ಲಿ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಚಿವರಾದ ವೆಂಕಟರಮಣಪ್ಪ, ಎಸ್.ಆರ್. ಶ್ರೀನಿವಾಸ್, ತಿಮ್ಮಾಪುರ, ಸಂಸದರಾದ ಎಸ್.ಪಿ.ಮುದ್ದಹುನುಮೇಗೌಡ, ಚಂದ್ರಪ್ಪ, ಶಾಸಕ ಜಿ.ಬಿ. ಜ್ಯೋತಿಗಣೇಶ್, ಮಾಜಿ ಶಾಸಕ ಕೆ.ಎನ್.ರಾಜಣ್ಣ, ಮಠಾಧೀಶರಾದ ಸಿದ್ದಗಂಗಾ ಮಠದ ಶ್ರೀಸಿದ್ದಲಿಂಗಸ್ವಾಮಿಜೀ, ಶ್ರೀ ಹನುಮಂತನಾಥಸ್ವಾಮೀಜಿ, ಶ್ರೀಬಸವ ಹರಳಯ್ಯಸ್ವಾಮೀಜಿ ಸೇರಿದಂತೆ ಹಲವರು ಭೇಟಿ ನೀಡಿ ಡಾ.ಸೂಲಗಿತ್ತಿ ನರಸಮ್ಮ ಅವರ ಅಂತಿಮ ದರ್ಶನ ಪಡೆದರು.
ಮದ್ಯಾಹ್ನವಾದರೂ ಬಗೆಹರಿಯದ ಶವಸಂಸ್ಕಾರದ ಜಾಗ: ಸೂಲಗಿತ್ತಿ ನರಸಮ್ಮ ಮಂಗಳವಾರ ಮಧ್ಯಾಹ್ನ ಮೃತಪಟ್ಟಿದ್ದು, ಬುಧವಾರ ಮಧ್ಯಾಹ್ನ 1 ಗಂಟೆಯಾದರೂ ಶವಸಂಸ್ಕಾರದ ಜಾಗದ ಕುರಿತು ಜಿಲ್ಲಾಡಳಿತ ಮತ್ತು ಕುಟುಂಬದ ನಡುವೆ ಉಂಟಾಗಿದ್ದ ಸಮಸ್ಯೆ ಬಗೆಹರಿದಿರಲಿಲ್ಲ. ಕುಟುಂಬದವರು ಹಿರಿಯ ಜೀವದ ಶವಸಂಸ್ಕಾರ ನಗರದ ಹತ್ತಿರದಲ್ಲಿಯೇ ನಡೆಯುಬೇಕು, ಇದಕ್ಕಾಗಿ ಜಿಲ್ಲಾಡಳಿತ ಒಂದು ಎಕರೆ ಜಾಗ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಆದರೆ ಜಿಲ್ಲಾಡಳಿತ ಈ ಕುರಿತು ಯಾವುದೇ ನಿರ್ಧಾರಕ್ಕೆ ಬಾರದ ಹಿನ್ನೆಲೆಯಲ್ಲಿ ಶವಸಂಸ್ಕಾರ ಸಾಕಷ್ಟು ತಡವಾಯಿತು.
ಗಂಗಸಂದ್ರ ಸ್ಮಶಾನದಲ್ಲಿ ಅಂತ್ಯಕ್ರಿಯೆ: ಅಂತಿಮವಾಗಿ ಜಿಲ್ಲಾಡಳಿತ ತುಮಕೂರು ನಗರಕ್ಕೆ ಹೊಂದಿಕೊಂಡಂತೆಯೇ ಇರುವ ಗಂಗಸಂದ್ರ ಸ್ಮಶಾನದಲ್ಲಿ ಒಂದು ಎಕರೆ ಜಾಗ ನೀಡಿದ್ದು, ಸದರಿ ಜಾಗದಲ್ಲಿ ಅಂತ್ಯಕ್ರಿಯೆ ನಡೆಸಲು ಕುಟುಂಬ ತೀರ್ಮಾನಿಸಿದ್ದು, ಸಂಜೆ ವೇಳೆಗೆ ಧಾರ್ಮಿಕ ವಿಧಿ ವಿಧಾನಗಳ ಮೂಲ ಸೂಲಗಿತ್ತಿ ನರಸಮ್ಮ ಅವರ ಅಂತ್ಯಕ್ರಿಯೆ ನರವೇರಿತು.
ಪಾವಗಡ ತಾಲೂಕಿನ ಕೃಷ್ಣಾಪುರದವರಾದ ಡಾ.ಸೂಲಗಿತ್ತಿ ನರಸಮ್ಮ ತನ್ನ ದೈನಂದಿನ ಕೆಲಸ ಕಾರ್ಯಗಳ ನಡುವೆಯೂ ತನ್ನ ಅತ್ತೆಯಿಂದ ಕಲಿತ ಸೂಲಗಿತ್ತಿ ಕೆಲಸವನ್ನು ಮುಂದುವರೆಸಿಕೊಂಡು ಬಂದಿದ್ದು, ಇದುವರೆಗೂ 1500 ಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿ ಸಾವಿರ ಮಕ್ಕಳ ತಾಯಿ ಎಂದು ಖ್ಯಾತರಾಗಿದ್ದಾರೆ.
ಪದ್ಮಶ್ರೀ ಡಾ.ಸೂಲಗಿತ್ತಿ ನರಸಮ್ಮ ಅವರ ಸಮಾಜ ಸೇವೆಯನ್ನು ಗುರುತಿಸಿ 2008ರ ಮಾರ್ಚ್8ರ ವಿಶ್ವ ಮಹಿಳಾ ದಿನಾಚರಣೆ ದಿನ ವರದಕ್ಷಿಣೆ ವಿರೋಧಿ ವೇದಿಕೆ ಹಾಗೂ ಮಹಿಳಾ ಸಾಂತ್ವನ ಕೇಂದ್ರದ ವತಿಯಿಂದ ಆಭಿನಂದಿಸಿದ್ದರು. ಆನಂತರ ಹಲವಾರು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ, ಗೌರವಿಸಿತ್ತು. 2016ರಲ್ಲಿ ರಾಷ್ಟ್ರೀಯ ವಯೋ ಸನ್ಮಾನ ಮತ್ತು 2017ರಲ್ಲಿ ಪದ್ಮಶ್ರೀ ಪಶಸ್ತಿಯನ್ನು ಕೇಂದ್ರ ಸರಕಾರ ನೀಡಿ ಗೌರವಿಸಿತ್ತು.







