ಪೊಲಾಕ್ ದಾಖಲೆ ಮುರಿದ ಸ್ಟೇಯ್ನ್‌ಗೆ ಟ್ವಿಟರ್‌ನಲ್ಲಿ ಸೆಲ್ಯೂಟ್
ದ. ಆಫ್ರಿಕ ಪರ ಗರಿಷ್ಠ ಟೆಸ್ಟ್ ವಿಕೆಟ್ ಪಡೆದ ಸ್ಟೇಯ್ನ್

ಸೆಂಚುರಿಯನ್, ಡಿ.26: ವೇಗದ ಬೌಲರ್ ಡೇಲ್ ಸ್ಟೇಯ್ನ ದಕ್ಷಿಣ ಆಫ್ರಿಕ ಪರ ಅತ್ಯಧಿಕ ಟೆಸ್ಟ್ ವಿಕೆಟ್ ಪಡೆದ ದಾಖಲೆಗೆ ಪಾತ್ರರಾಗಿದ್ದಾರೆ. ಬುಧವಾರ ಪಾಕಿಸ್ತಾನ ವಿರುದ್ಧ ಇಲ್ಲಿ ಆರಂಭಗೊಂಡ ಪಂದ್ಯದಲ್ಲಿ ಅವರು ಫಾಕರ್ ಝಮಾನ್ ವಿಕೆಟ್ ಉರುಳಿಸುವ ಮೂಲಕ ಈ ಸಾಧನೆ ಮಾಡಿದರು. 422ನೇ ಟೆಸ್ಟ್ ಬಲಿ ಪಡೆಯುವ ಮೂಲಕ ಅವರು ದ.ಆಫ್ರಿಕದ ಮಾಜಿ ಬೌಲರ್ ಶಾನ್ ಪೊಲಾಕ್(421 ವಿಕೆಟ್) ದಾಖಲೆ ಮುರಿದರು.
35 ವರ್ಷ ವಯಸ್ಸಿನ ವೇಗಿ ಸ್ಟೇಯ್ನಿ, ತಾನಾಡಿದ 89ನೇ ಪಂದ್ಯದಲ್ಲಿ ಈ ದಾಖಲೆ ಬರೆದರು. ಗಾಯದ ಕಾರಣದಿಂದ 27 ಟೆಸ್ಟ್ ಪಂದ್ಯಗಳಿಂದ ದೂರವುಳಿದಿದ್ದ ಸ್ಟೇಯ್ನ್ ವಿಕೆಟ್‌ಗಳ ಬರ ಎದುರಿಸಿದ್ದರು. ಆ ಬರವನ್ನು ಝಮಾನ್ ವಿಕೆಟ್ ನೀಗಿಸಿತು. ಅತಿ ಹೆಚ್ಚು ಟೆಸ್ಟ್ ವಿಕೆಟ್ ಸಾಧಕರ ಪಟ್ಟಿಯಲ್ಲಿ ಸ್ಟೇಯ್ನಿ 11 ಸ್ಥಾನದಲ್ಲಿದ್ದಾರೆ. 800 ವಿಕೆಟ್ ಪಡೆದಿರುವ ಶ್ರೀಲಂಕಾದ ಬೌಲಿಂಗ್ ದಂತಕತೆ ಮುತ್ತಯ್ಯ ಮುರಳೀಧರನ್ ಈ ಪಟ್ಟಿಯ ಅಗ್ರಸ್ಥಾನಿ.
ತಮ್ಮ ದಾಖಲೆ ಮುರಿದಿರುವ ಸ್ಟೇಯ್ನ ಸಾಧನೆಗೆ ದ.ಆಫ್ರಿಕದ ಮಾಜಿ ಬೌಲರ್ ಶಾನ್ ಪೊಲಾಕ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಟಿವಿ ಕಾಮೆಂಟರಿಯಲ್ಲಿ ಪ್ರತಿಕ್ರಿಯಿಸಿರುವ ಅವರು, ‘‘ಖಂಡಿತವಾಗಿಯೂ ಸ್ಟೇಯ್ನಿ ಅದ್ಭುತ ಸಾಧಕ, ಪರಿಪೂರ್ಣ ಚಾಂಪಿಯನ್ ಮತ್ತು ಬೌಲಿಂಗ್‌ನ ನಾಯಕ’’ ಎಂದು ಕೊಂಡಾಡಿದ್ದಾರೆ.





