'ಟಿ.ಜಿ., ಎಚ್.ಟಿ.ಕಾಯ್ದೆಯಿಂದ ತೃತೀಯ ಲಿಂಗಿಗಳ ಹಕ್ಕು ಉಲ್ಲಂಘನೆ'
ಉಡುಪಿಯಲ್ಲಿ ಸಂಘಟನೆಗಳಿಂದ ಪ್ರತಿಭಟನೆ

ಉಡುಪಿ, ಡಿ.26: ಲೋಕಸಭೆಯಲ್ಲಿ ಅನುಮೋದಿಸಲಾಗಿರುವ ತೃತೀಯ ಲಿಂಗಿ (ಟಿ.ಜಿ.) ವ್ಯಕ್ತಿಗಳ ಹಕ್ಕುಗಳ ರಕ್ಷಣೆ ತಿದ್ದುಪಡಿ ಕಾಯ್ದೆ 2018ನ್ನು ಹಿಂಪಡೆಯಬೇಕು ಮತ್ತು ಮಾನವ ಕಳ್ಳಸಾಗಣೆ (ಎಚ್.ಟಿ.) ಕಾಯ್ದೆಯನ್ನು ಪುನರ್ ವಿಮರ್ಶಿಸಬೇಕು ಎಂದು ಆಗ್ರಹಿಸಿ ಉಡುಪಿಯ ತೃತೀಯ ಲಿಂಗಿಗಳ ಆಶ್ರಯ ಸಮುದಾಯ ಸಂಘಟನೆ ಮತ್ತು ಸಂಗಮ ಸಂಘಟನೆಯ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಸಂಘಟನೆಗಳ ಕಾರ್ಯಕರ್ತರು ಅಜ್ಜರಕಾಡಿನಲ್ಲಿರುವ ಭುಜಂಗ ಪಾರ್ಕಿನ ಗಾಂಧಿ ಪ್ರತಿಮೆಯ ಬಳಿ ಸೇರಿ ಧರಣಿ ನಡೆಸಿದರಲ್ಲದೇ ಬಳಿಕ ಮೆರವಣಿಗೆ ಯಲ್ಲಿ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಅವರ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಶ್ರಯ ಸಮುದಾಯ ಸಂಘಟನೆಯ ಪ್ರಮುಖರಾದ ಸಂಜೀವ ವಂಡ್ಸೆ, ಈಗಾಗಲೇ ಜಾರಿಯಲ್ಲಿದ್ದ ತೃತೀಯ ಲಿಂಗಿಗಳ ಕಾಯ್ದೆಗೆ ಕೇಂದ್ರ ಸರಕಾರ 27 ತಿದ್ದಪಡಿಗಳನ್ನು ಮಾಡಿ ಲೋಕಸಭೆಯಲ್ಲಿ ಅಂಗೀಕರಿಸಿದೆ. ತಿದ್ದುಪಡಿ ಮಾಡಲಾದ ಟ್ರಾನ್ಸ್‌ಜೆಂಡರ್ ಬಿಲ್‌ನಲ್ಲಿ ‘ಟ್ರಾನ್ಸ್‌ಜಂಡರ್’ ಪದದ ಸುಧಾರಿತ ವ್ಯಾಖ್ಯಾನ ಸ್ವಾಗತಾರ್ಹ ವಾಗಿದೆ. ಇದನ್ನು ಹೊರತು ಪಡಿಸಿ ಈ ಜನವಿರೋಧಿ ಬಿಲ್‌ನ್ನು ಸ್ವೀಕರಿಸಲು ಅನರ್ಹ ವಾಗಿದೆ. ಇದಕ್ಕೆ ಇನ್ನೊಮ್ಮೆ ತಿದ್ದುಪಡಿ ಮಾಡಲೇಬೇಕಾಗಿದೆ ಎಂದರು.
ಈ ತಿದ್ದುಪಡಿಯಿಂದಾಗಿ ಭಾರತದ ಸಂವಿಧಾನವು ವ್ಯಕ್ತಿಗಳ ಸಮಾನತೆ ಮತ್ತು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ತೃತೀಯ ಲಿಂಗಿಗಳಿಗೆ ಶಿಕ್ಷಣ, ಉದ್ಯೋಗದಲ್ಲಿದ್ದ ಮೀಸಲಾತಿಯನ್ನು ರದ್ದುಪಡಿಸಿದೆ. ತೃತೀಯ ಲಿಂಗಿಗಳ ಮೂಲವೃತ್ತಿಯಾದ ಭಿಕ್ಷೆ ಬೇಡುವುದನ್ನು ಅಪರಾಧ ಎಂದು ಹೇಳಿದೆ. ದೇಶದ ಇತರ ಪ್ರಜೆಗಳಿಗಿರುವಂತೆ ತೃತೀಯ ಲಿಂಗಿಗಳು ತಮ್ಮ ಇಚ್ಛೆಯಂತೆ ಬದುಕುವುದಕ್ಕೆ ಅವಕಾಶವನ್ನು ನಿರಾಕರಿಸಲಾಗಿದೆ. ಆದ್ದರಿಂದ ಈ ಕಾಯ್ದೆಯನ್ನು ಹಿಂಪಡೆದು, ಕಾಯ್ದೆಯನ್ನು ಪುನಃ ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸಿದರು.
ಇನ್ನೊಬ್ಬ ಪ್ರಮುಖ ಮಹೇಶ್ ಪಾಟೀಲ್ ಮಾತನಾಡಿ, ಲೋಕಸಭೆಯಲ್ಲಿ ಮಾನವ ಕಳ್ಳಸಾಗಣೆ ತಡೆ ಕಾಯ್ದೆಯನ್ನು ಮಂಡಿಸಲಾಗಿದೆ, ಈಗಾಗಲೇ ಜಾರಿಯಲ್ಲಿರುವ ಸೆಕ್ಷನ್ 370 ಮತ್ತು 370ಎ ಪ್ರಕಾರ ಮಾನವ ಕಳ್ಳಸಾಗಣೆ ತಪ್ಪಾದರೂ, ಈ ಕಾಯ್ದೆಯು ತೃತೀಯ ಲಿಂಗಿಗಳ ಹಕ್ಕುಗಳನ್ನು ಕಸಿದು ಕೊಳ್ಳುತ್ತಿದೆ. ವಯಸ್ಕ ತೃತೀಯ ಲಿಂಗಿಗಳು ತಮ್ಮ ಸ್ವಇಚ್ಛೆಯಿಂದ ದೇಶದ ಯಾವುದೇ ಭಾಗದಲ್ಲಿ, ಲೈಂಗಿಕ ವೃತ್ತಿಯಲ್ಲಿರುವವರನ್ನು ಬಲವಂತವಾಗಿ ರಕ್ಷಣೆಯ ಹೆಸರಿನಲ್ಲಿ ದಾಳಿ ನಡೆಸಿ ಪುನರ್ವಸತಿ ಕೇಂದ್ರಗಳಿಗೆ ತಳ್ಳಲಾಗುತ್ತಿದೆ ಎಂದು ಟೀಕಿಸಿದರು.
ಈ ವೃತ್ತಿಗೂ ಕಳ್ಳಸಾಗಣೆಗೂ ಸಂಬಂಧವೇ ಇಲ್ಲದಿದ್ದರೂ ದಾಳಿ ನಡೆಸಲಾಗುತ್ತಿದೆ. ಅವರನ್ನು ಪುನಃ ಅವರ ಊರಿಗೆ ಕಳುಹಿಸಲಾಗುತ್ತಿದೆ. ವಿಚಿತ್ರ ಎಂದರೇ ಈ ಕಾಯ್ದೆಯಲ್ಲಿ ತೃತೀಯ ಲಿಂಗಿಗಳು ಬಳಸುವ ಹಾರ್ಮೋನು ಮಾತ್ರೆಗಳಿಗೂ ನಿಷೇಧ ಹೇರಲಾಗಿದೆ. ಆದ್ದರಿಂದ ಈ ಕಾಯ್ದೆ ಲೈಂಗಿಕ ಕಾರ್ಯಕರ್ತರ ಹಕ್ಕನ್ನು ಉಲ್ಲಂಘಿಸುತ್ತದೆ. ಆದ್ದರಿಂದ ಈ ಕಾಯ್ದೆಯನ್ನು ಪುನಃ ಲೋಕಸಭೆಯ ಆಯ್ಕೆ ಸಮಿತಿ ಮುಂದಿಟ್ಟು, ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಪ್ರತಿಭನೆಯಲ್ಲಿ ಸಂಘಟನೆಗಳ ಪ್ರಮುಖರಾದ ಕಾಜಲ್, ಸಂಧ್ಯಾ, ಲಾವಣ್ಯ, ನಿಷಾ, ರೇಖಾ ಮುಂತಾದವರು ಭಾಗವಹಿಸಿದ್ದರು.