‘ಮದ್ದಳೆ ಮಾಂತ್ರಿಕ’ ಹಿರಿಯಡ್ಕ ಗೋಪಾಲರಾಯರಿಗೆ ನೂರರ ಹೊಸ್ತಿಲಲ್ಲಿ ಸನ್ಮಾನ, ವಿಚಾರ ಸಂಕಿರಣ

ಉಡುಪಿ, ಡಿ.26: ಶತಮಾನದ ಹೊಸ್ತಿಲಲ್ಲಿರುವ ಯಕ್ಷಗಾನದ ಹಿರಿಯ ಕಲಾವಿದ, ‘ಮದ್ದಳೆ ಮಾಂತ್ರಿಕ’ ಹಿರಿಯಡಕ ಗೋಪಾಲರಾವ್ ಇವರಿಗೆ ಸನ್ಮಾನ ಹಾಗೂ ವಿಚಾರ ಸಂಕಿರಣ ಡಿ. 29ರಂದು ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪಲ್ಲಿ ಬೆಳಗ್ಗೆ 10:30ರಿಂದ ನಡೆಯಲಿದೆ.
ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಯಕ್ಷಗಾನ ಕೇಂದ್ರ ಇಂದ್ರಾಳಿ, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್, ಹಿರಿಯಡಕ ಸಂಸ್ಕೃತಿ ಸಿರಿ ಟ್ರಸ್ಟ್ ಹಿರಿಯಡಕ ಇವುಗಳ ಸಹಯೋಗದಲ್ಲಿ ಈ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಕೇಂದ್ರದ ಸಂಯೋಜನಾಧಿಕಾರಿ ಪ್ರೊ. ವರದೇಶ ಹಿರೇಗಂಗೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯಡಕ ಗೋಪಾಲ ರಾಯರ ಬದುಕು -ಸಾಧನೆ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಯಕ್ಷಗಾನ ವಿದ್ವಾಂಸರಾದ ಡಾ. ಕೆ. ಎಂ.ರಾಘವ ನಂಬಿಯಾರ್, ಪ್ರೊ.ಎಂ.ಎಲ್.ಸಾಮಗ, ಗುರು ಬನ್ನಂಜೆ ಸಂಜೀವ ಸುವರ್ಣ ಇದರಲ್ಲಿ ಭಾಗವಹಿಸಲಿದ್ದಾರೆ. ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್‌ನ ಆಡಳಿತಾಧಿಕಾರಿ ಡಾ.ಎಚ್. ಶಾಂತಾರಾಮ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಗೋಪಾಲರಾಯರ ಜೀವನದ ಕುರಿತ ಡಾ. ಎಂ. ರಾಘವ ನಂಬಿಯಾರ್ ಸಂಪಾದಿಸಿದ ‘ರಂಗ ವಿದ್ಯೆಯ ಹೊಲಬು’ ಪುಸ್ತಕವನ್ನು ಪ್ರೊ.ಮುರಳೀಧರ ಉಪಾಧ್ಯ ಹಿರಿಯಡಕ ಬಿಡುಗಡೆಗೊಳಿಸಿ ಮಾತನಾಡಲಿದ್ದಾರೆ. ಆರಂಭದಲ್ಲಿ ಗುರು ಬನ್ನಂಜೆ ಸಂಜೀವ ಸುವರ್ಣರಿಂ ಯಕ್ಷಗಾನ ಪ್ರಾತ್ಯಕ್ಷಿಕೆ ನಡೆಯಲಿದೆ.
ನೂರರ ಹೊಸ್ತಿಲಲ್ಲಿರುವ ಹಿರಿಯಡಕ ಗೋಪಾಲರಾಯರು ಸ್ವಾತಂತ್ರ ಹೋರಾಟಕ್ಕೆ ಸಾಕ್ಷಿಯೂ ಆಗಿ ಭಾಗವಹಿಸಿದವರು. ಹಿರಿಯಡಕದಲ್ಲಿ ಶೇಷಗಿರಿ ರಾವ್ ಮತ್ತು ಲಕ್ಷ್ಮೀಬಾಯಿ ದಂಪತಿಯ ಮಗನಾಗಿ 1919ರ ಡಿ.15ರಂದು ಜನಿಸಿದ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು 7ನೇ ತರಗತಿಗೆ ನಿಲ್ಲಿಸಿ ಕೃಷಿಯಲ್ಲಿ ಆಸಕ್ತಿ ಹೊಂದಿದ್ದರು. ಆರಂಭದಲ್ಲಿ ಯಕ್ಷಗಾನದ ಎಲ್ಲ ಅಂಗಗಳಲ್ಲಿ ಆಸಕ್ತಿ ಹೊಂದಿದ್ದರೂ, ಮದ್ದಳೆಯ ಮೇಲೆ ವಿಶೇಷ ಮೋಹ ಅವರಿಗಿತ್ತು. ತಮ್ಮ ಛಲ ಮತ್ತು ಸಾಧನೆಯಿಂದ ಮದ್ದಳೆಗೆ ತಮ್ಮನು್ನ ಸಂಪೂರ್ಣವಾಗಿ ತೊಡಗಿಸಿಕೊಂಡರು.
ಆ ಕಲೆಗೆ ತನ್ನನ್ನೇ ಸಮರ್ಪಿಸಿಕೊಂಡು ಅತ್ಯಂತ ಎತ್ತರದ ಕಲಾವಿದರಾಗಿ ಬೆಳೆದರು. ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಹಿರಿಯ ಶಿಕ್ಷಕರಾಗಿ ದುಡಿದ ಇವರು, ದೇಶ ವಿದೇಶಗಳ ಕಲಾತಜ್ಞರ ತಂಡಕ್ಕೆ ಸಮಗ್ರ ಮಾಹಿತಿ ನೀಡ ಬಲ್ಲವರಾದರು. ಮದ್ದಳೆಯಲ್ಲಿ ಇವರು ತೋರುವ ಕೈಚಳಕ ಮತ್ತು ಸದಾ ಹುಮ್ಮಸ್ಸಿನಿಂದ ಇವರಿಗೆ ‘ಮದ್ದಳೆ ಮಾಂತ್ರಿಕ’ಎಂಬ ಹೆಸರು ಅನ್ವರ್ಥವಾಯಿತು.
ಹಿರಿಯಡಕ ಯಕ್ಷಗಾನ ತಂಡವನ್ನು ಪ್ರಾರಂಭಿಸಿದ ರಾವ್, ನೂರರ ಈ ವಯಸ್ಸಿನಲ್ಲೂ ಮದ್ದಳೆಯನ್ನು ನುಡಿಸಬಲ್ಲರು. ಇವರಿಗೆ ಹಲವಾರು ಗೌರವ, ಸಂಮಾನ, ಪ್ರಶಸ್ತಿಗಳು ಸಂದಿವೆ. ಕರ್ನಾಟಕ ಸರಕಾರ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಯನ್ನು ಇವರಿಗೆ ನೀಡಿ ಗೌರವಿಸಿದೆ.