ರಾಜ್ಯ ಸರಕಾರದಿಂದ 113 ಜಯಂತಿಗಳ ಆಚರಣೆ: ಐವನ್ ಡಿಸೋಜ
ದ.ಕ. ಜಿಲ್ಲಾ ಮಟ್ಟದ ಕನಕ ಜಯಂತಿ ಆಚರಣೆ

ಮಂಗಳೂರು, ಡಿ. 26: ರಾಜ್ಯ ಸರಕಾರವು ಪ್ರತಿ ವರ್ಷ 113 ಜಯಂತಿಗಳನ್ನು ಆಚರಿಸುತ್ತಿದೆ. ಆ ಪೈಕಿ ಕನಕ ಜಯಂತಿ ಸಹಿತ ಕೆಲವೇ ಜಯಂತಿಗಳು ಅರ್ಥಗರ್ಭಿತವಾಗಿವೆ. 15-16ನೇ ಶತಮಾನದಲ್ಲಿ ಬಾಳಿದ ಕನಕದಾಸರ ಸಾಹಿತ್ಯ ಇಂದಿಗೂ ಉಳಿದಿದೆ. ಸಮಾಜಕ್ಕೆ ಅವರ ಕೊಡುಗೆ ಅಪಾರ. ಹಾಗಾಗಿ ಕನಕ ಅಧ್ಯಯನ ಪೀಠದಿಂದ ಅವರ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯಬೇಕು ಎಂದು ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಹೇಳಿದರು.
ದ.ಕ. ಜಿಲ್ಲಾಡಳಿತ, ದ.ಕ.ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ತುಳು ಭವನದ ಸಿರಿ ಚಾವಡಿಯಲ್ಲಿ ಬುಧವಾರ ನಡೆದ ಕನಕ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಳೂರಿನಲ್ಲಿ ಕುರುಬರು ಸಂಘಟಿತರಾಗಿದ್ದಾರೆ. ಹಾಗಾಗಿ ಕನಕ ಭವನ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಅಲ್ಲದೆ, ಮಂಗಳೂರಿನ ಒಂದು ಕನಕದಾಸರ ಹೆಸರನ್ನಿಡುವ ಚಿಂತನೆ ಇದೆ ಎಂದ ಐವನ್ ಡಿಸೋಜ ಮೇಲ್ವರ್ಗ, ಕೆಳವರ್ಗದ ಸಂಘರ್ಷದ ಕಾಲ ಘಟ್ಟದಲ್ಲಿ ಅವಮಾನ ಎದುರಿಸಿ ಭಕ್ತಿಯ ಮೂಲಕ ದೇವರನ್ನು ಕಾಣಬಹುದು ಎನ್ನುವ ಸಂದೇಶ ನೀಡಿದ ಕನಕದಾಸರ ಸಾಹಿತ್ಯ ಎಲ್ಲ ಕಾಲಕ್ಕೂ ಅನ್ವಯವಾಗಿದೆ. ಅವರ ಸಾಹಿತ್ಯದ ಸಾರವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮಾತನಾಡಿ ಪ್ರತಿ ಆಚರಣೆಗಳ ಸಂದೇಶ ಒಂದೇ ಆಗಿದೆ. ಶಾಂತಿ, ಸೌಹಾರ್ದದ ಬದುಕು ಎಲ್ಲರದ್ದಾಗಬೇಕು ಎಂಬುದು ಪ್ರತಿಯೊಬ್ಬ ಸಂತರ ಆಶಯವಾಗಿದೆ. ಆದರ್ಶ ಪಾಲನೆ ಮಾಡಿದಾಗ ಮಾತ್ರ ಜಯಂತಿ ಆಚರಣೆಗೆ ವಿಶೇಷ ಅರ್ಥ ಬರುತ್ತದೆ ಎಂದರು.
ವೇದಿಕೆಯಲ್ಲಿ ದ.ಕ.ಜಿಪಂ ಸಿಇಒ ಡಾ.ಸೆಲ್ವಮಣಿ ಆರ್, ಅಪರ ಜಿಲ್ಲಾಧಿಕಾರಿ ಕುಮಾರ್, ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕರಾವಳಿ ಕುರುಬರ ಸಂಘದ ಅಧ್ಯಕ್ಷ ಡಾ.ಕೆ.ಇ.ಪ್ರಕಾಶ್, ಹಾಲುಮತ ಮಹಾಸಭಾದ ಅಧ್ಯಕ್ಷ ರಂಗಪ್ಪ ನಡುಕಟ್ಟೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಅಧ್ಯಕ್ಷ ಧನುಷ್, ಕರ್ನಾಟಕ ಪ್ರದೇಶ ಪದವೀಧರ ಕುರುಬರ ಸಂಘದ ಕಾರ್ಯದರ್ಶಿ ಚಂದ್ರಶೇಖರ ಉಪಸ್ಥಿತರಿದ್ದರು.
ಪತ್ರಕರ್ತ ಜಿತೇಂದ್ರ ಕುಂದೇಶ್ವರ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು.
ಉರ್ವಸ್ಟೋರ್‌ನಿಂದ ತುಳು ಭವನದವರೆಗೆ ಆಕರ್ಷಕ ಮೆರವಣಿಗೆ ನಡೆಯಿತು. ಕನಕದಾಸರು ಹಾಗೂ ಸಂಗೊಳ್ಳಿ ರಾಯಣ್ಣ ವೇಷಧಾರಿಗಳು ಗಮನ ಸೆಳೆದರು.