ಜ.12: ‘ಸಂವಿಧಾನ ಓದು’ ಕಾರ್ಯಾಗಾರ
ಮಂಗಳೂರು, ಡಿ.26: ಭಾರತ ಸಂವಿಧಾನದ ಮೂಲತತ್ವ್ವಗಳಾದ ಪ್ರಜಾಪ್ರಭುತ್ವ, ಮತ ನಿರಪೇಕ್ಷತೆ, ಸಮಾನತೆ, ಸಮಾಜವಾದ, ಸಾರ್ವಭೌಮತ್ವ, ಭಾತೃತ್ವ ಮೊದಲಾದ ತತ್ವಗಳನ್ನು ಹಾಗೂ ಸಂವಿಧಾನದ ನಿರ್ದೇಶಕ ತತ್ವಗಳನ್ನು ಯುವಜನತೆ ಅಂತರ್ಗತಗೊಳಿಸ ಬೇಕಾದ ಅಗತ್ಯದ ನಿಟ್ಟಿನಲ್ಲಿ ‘ಸಂವಿಧಾನ ಓದು ಅಭಿಯಾನ’ ವನ್ನು ಸಮುದಾಯ ಕರ್ನಾಟಕ ಸಾಂಸ್ಕೃತಿಕ ಸಂಘಟನೆಯು ಹಮ್ಮಿಕೊಂಡಿದೆ. ದ.ಕ. ಜಿಲ್ಲೆಯಲ್ಲಿ ನ್ಯಾಯವಾದಿ ಯಶವಂತ ಮರೋಳಿ ಅಧ್ಯಕ್ಷರಾಗಿರುವ ಸಮಿತಿಯನ್ನು ರಚಿಸಲಾಗಿದೆ.
ರಾಜ್ಯ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ಎಚ್.ಎನ್.ನಾಗಮೋಹನದಾಸ್ ಸಂವಿಧಾನ ಪ್ರಚಾರಕ ಸಿದ್ಧಗೊಳಿಸುವ ತರಬೇತಿ ಕಾರ್ಯಾ ಗಾರವನ್ನು ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ನಡೆಸಿಕೊಡುತ್ತಿದ್ದಾರೆ.
ಅದರಂತೆ 2019ರ ಜನವರಿ 12ರಂದು ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ಎರಿಕ್ ಮಥಾುಸ್ ಸಭಾಂಗಣದಲ್ಲಿ ದ.ಕ.ಜಿಲ್ಲಾ ಸಂವಿಧಾನ ಓದು ಅಭಿಯಾನ ಕಾರ್ಯಾಗಾರ ನಡೆಯಲಿದೆ. ನ್ಯಾ.ಎಚ್.ಎನ್.ನಾಗಮೋಹನ್‌ದಾಸ್ ಕಾರ್ಯಾಗಾರ ನಡೆಸಿಕೊಡಲಿದ್ದಾರೆ.
ಆಸಕ್ತ ಅಧ್ಯಾಪಕರು, ನ್ಯಾಯವಾದಿಗಳು, ಸಮಾಜಸೇವಕರು ಭಾಗವಹಿಸುವುದನ್ನು ಖಾತ್ರಿಪಡಿಸಲು ಸಮಿತಿಯ ಕಾರ್ಯದರ್ಶಿ ಮನೋಜ್ ವಾಮಂಜೂರು (9964710557) ಅಥವಾ ಕೋಶಾಧಿಕಾರಿ ವಾಸುದೇವ ಉಚ್ಚಿಲ (9632095219) ಅವರ ಬಳಿ ಹೆಸರು ನೋಂದಾಯಿಸಬಹುದು.
ದ.ಕ.ಜಿಲ್ಲೆಯ ಪದವಿ ಕಾಲೇಜು ಅಧ್ಯಾಪಕರು ‘ಅನ್ಯ ಕಾರ್ಯ ನಿಮಿತ್ತ’ ಸೌಲಭ್ಯವನ್ನು ಬಳಸಬಹುದೆಂದು ದ.ಕ.ಜಿಲ್ಲಾ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ತಮ್ಮ ಸುತ್ತೋಲೆ ಮೂಲಕ ತಿಳಿಸಿದೆ ಎಂದು ಪ್ರಕಟನೆ ತಿಳಿಸಿದೆ.