ಕರಾವಳಿಯ ಪರಂಪರೆ ಅರಿಯಲು ರಸಪ್ರಶ್ನೆ ಸಹಕಾರಿ: ಡಿಸಿ ಸಸಿಕಾಂತ್

ಮಂಗಳೂರು, ಡಿ.26: ದ.ಕ. ಜಿಲ್ಲೆಯ ಸಂಸ್ಕೃತಿ, ಚರಿತ್ರೆ, ಅಭಿರುಚಿಗಳು, ಪರಂಪರೆಯನ್ನು ಅರಿಯುವ ನಿಟ್ಟಿನಲ್ಲಿ ರಸಪ್ರಶ್ನೆ ಕಾರ್ಯಕ್ರಮ ಆಯೋಜನೆ ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.
ನಗರದ ಪುರಭವನದಲ್ಲಿ ಕರಾವಳಿ ಉತ್ಸವದ ಅಂಗವಾಗಿ ಜಿಲ್ಲಾ ಪ್ರವಾಸೋದ್ಯಮ ಸಮಿತಿ ಆಯೋಜಿಸಿದ್ದ ಮಂಗಳೂರು ಕ್ವಿಜ್ ಲೀಗ್ ಹಂತ-1 ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರವಾಸೋದ್ಯಮ ಮತ್ತು ಉದ್ಯಮಕ್ಕೆ ಸಂಬಂಧಿಸಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಸಾಮಾನ್ಯ ರಸಪ್ರಶ್ನೆ ಸ್ಪರ್ಧೆಯಲ್ಲಿ 500ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇವರಲ್ಲಿ ಅಂತಿಮ ಸುತ್ತಿಗೆ ತಲಾ ಎರಡು ವಿದ್ಯಾರ್ಥಿಗಳಂತೆ 6 ತಂಡಗಳನ್ನು ಆಯ್ಕೆ ಮಾಡಲಾಯಿತು.
ನೇತ್ರಾವತಿ ಎಕ್ಸ್‌ಪ್ರೆಸ್‌ನ ರಸಪ್ರಶ್ನೆ ವಿಜೇತರಾಗಿ ಪ್ರಥಮ ಬಹುಮಾನ ವಿದ್ಯಾರ್ಥಿಗಳಾದ ಪ್ರೀತಮ್ ಉಪಾಧ್ಯ ಮತ್ತು ಪೃಥ್ವಿ ಮೊಂತೆರೊ, ದ್ವಿತೀಯ ಬಹುಮಾನವನ್ನು ಎನ್‌ಐಟಿಕೆ ಸುರತ್ಕಲ್ ದ್ವಿತೀಯ ಪಿಯು ವಿದ್ಯಾರ್ಥಿಗಳಾದ ಪ್ರಜ್ಞಾ ಎನ್.ಹೆಬ್ಬಾರ್ ಮತ್ತು ರಕ್ಷಿತ್ ಕುಮಾರ್ ಜೆ, ತೃತೀಯ ಬಹುಮಾನ ವನ್ನು ಬಿಜೈ ಲೂಡ್ಸ್ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿಗಳಾದ ಶ್ರೇಯಸ್ ಮತ್ತು ಶಾರ್ದುಲ್ ಪಡೆದುಕೊಂಡರು.
ಮಂಗಳಾ ಎಕ್ಸ್‌ಪ್ರೆಸ್‌ನ ರಸಪ್ರಶ್ನೆಯ ವಿಜೇತರಾಗಿ ಪ್ರಥಮ ಬಹುಮಾನವನ್ನು ರಜತ್ ಶೆಟ್ಟಿ, ದ್ವಿತೀಯ ಬಹುಮಾನವನ್ನು ಡಾ.ಅನಿಲ್ ಶೆಟ್ಟಿ ಮತ್ತು ವಿಕಾಸ್ ಮೂಡುಬಿದಿರೆ, ತೃತೀಯ ಬಹುಮಾನವನ್ನು ವಿಶ್ವಾಸ್ ಕೆ. ಪೈ ಮತ್ತು ಅಣ್ಣಪ್ಪ ಕಾಮತ್ ಪಡೆದುಕೊಂಡರು.
ಮಂಗಳಾ ಎಕ್ಸ್‌ಪ್ರೆಸ್‌ನ ರಸಪ್ರಶ್ನೆಯ ವಿಜೇತರನ್ನು ಹೊರತುಪಡಿಸಿ ಡಾ.ನಂದಕಿಶೋರ್ ಮತ್ತು ವಿವೇಕ್ ಪಿಂಟೋ, ಶಿಲ್ಪಾಪೈ ಮತ್ತು ಶ್ರೀನಿವಾಸ ಕೆ.ಜೆ. ಮತ್ತು ನೀಲ್ ಗೊರಾಡಿಯಾ ಮತ್ತು ಕ್ಲಿಂಟನ್ ಬ್ಯಾಪ್ಟಿಸ್ಟ್ ಅಂತಿಮ ಸುತ್ತಿಗೆ ಆಯ್ಕೆಯಾದರು. ವಿಜೇತರಿಗೆ ಬಹುಮಾನವನ್ನು ಮಹಾನಗರಪಾಲಿಕೆಯ ಆಯುಕ್ತ ಮುಹಮ್ಮದ್ ನಜೀರ್ ವಿತರಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಉದಯ ಶೆಟ್ಟಿ, ಅರುಣ್ , ರಮ್ಯ ರಶ್ಮಿ ಕ್ಯೂ ಫ್ಯಾಕ್ಟರಿ ಮತ್ತಿತರರು ಉಪಸ್ಥಿತರಿದ್ದರು. ಕ್ವಿಜ್ ಮಾಸ್ಟರ್ ಸ್ನೇಹಜ್ ಶ್ರೀನಿವಾಸ ಕಾರ್ಯಕ್ರಮ ನಿರೂಪಿಸಿದರು.







