ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನಿಂದ 2ನೇ ರಾಜ್ಯ ಸಮ್ಮೇಳನ
ಮಂಗಳೂರು, ಡಿ.26: ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನಿಂದ 2ನೇ ರಾಜ್ಯ ಸಮ್ಮೇಳನವನ್ನು ಡಿ.29 ಮತ್ತು 30ರಂದು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿ ಆಯೋಜಿಸಲಾಗಿದೆ.
ಡಿ. 29ರಂದು ಬೆಳಗ್ಗೆ 10:30ಕ್ಕೆ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮವನ್ನು ಮೈಸೂರಿನ ರಾಜಮಾತೆ ಪ್ರಮೋದಾದೇವಿ ಒಡೆಯರ್ ನೆರವೇರಿಸಲಿ ದ್ದಾರೆ. ಸಮ್ಮೇಳನದ ಅಧ್ಯಕ್ಷತೆಯನ್ನು ಸಾಹಿತಿ ಪ್ರೊ.ಪ್ರೇಮಶೇಖರ ವಹಿಸಲಿದ್ದಾರೆ. ದಿಕ್ಸೂಚಿ ಭಾಷಣವನ್ನು ಅಭಾವಿಪ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಋಷಿಕುಮಾರ್ ಮಿಶ್ರಾ ನಡೆಸಲಿದ್ದಾರೆ. ಅಭಾಸಾಪ ಅಧ್ಯಕ್ಷ ಡಾ.ದೊಡ್ಡ ರಂಗೇಗೌಡ, ಅಭಾಸಾಪ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್, ಅಭಾಸಾಪ ಮೈಸೂರು ಅಧ್ಯಕ್ಷ ಸಾತನೂರು ದೇವರಾಜ್ ಉಪಸ್ಥಿತರಿರುವರು. ಅಂದು ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಹರೀಶ್ ಬೆಂಗಳೂರು, ಉದ್ಯಮಿ ಜೆ.ಕೆ ಜಯರಾಮ್ ಅವರಿಗೆ ಗೌರವ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಒಂದನೇ ಗೋಷ್ಠಿಯಲ್ಲಿ ‘ಕರ್ನಾಟಕದ ಭಾಷೆಗಳ ಸಾಹಿತ್ಯದಲ್ಲಿ ಭಾರತೀಯ’ ವಿಷಯದಲ್ಲಿ ಆಕಾಶವಾಣಿ ಧಾರವಾಡ ಕಾರ್ಯಕ್ರಮ ನಿರ್ವಾಹಕ ದಿವಾಕರ ಹೆಗಡೆ ಉಪನ್ಯಾಸ ನೀಡಲಿದ್ದು, ಅಭಾಸಾಪ ಉಪಾಧ್ಯಕ್ಷ ಎಸ್.ಜಿ.ಕೋಟಿ ಅಧ್ಯಕ್ಷತೆ ವಹಿಸಲಿದ್ದಾರೆ.
2ನೇ ಗೋಷ್ಠಿಯಲ್ಲಿ ‘ಸಂಸ್ಕೃತ ಸಾಹಿತ್ಯದಲ್ಲಿ ಭಾರತೀಯತೆ’ ವಿಷಯದಲ್ಲಿ ಸಂಸ್ಕೃತ ವಿದುಷಿ ಡಾ. ಎಸ್.ಆರ್.ಲೀಲಾ ಉಪನ್ಯಾಸ ನೀಡಲಿದ್ದು, ಹಿರಿಯ ಸಾಹಿತಿ ಪ್ರೊ.ಸಿ.ಪಿ. ಕೃಷ್ಣ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 6 ಗಂಟೆಗೆ ಸಾಂಸ್ಕತಿಕ ಕಾರ್ಯಕ್ರಮಗಳು ನಡೆಯಲಿವೆ.
ಡಿ.30ರಂದು ನಡೆಯುವ 2ನೇ ಗೋಷ್ಠಿಯಲ್ಲಿ ‘ಬಹುಭಾಷ ಕವಿಗೋಷ್ಠಿ’ಯ ಅಧ್ಯಕ್ಷತೆಯನ್ನು ಸಾಹಿತಿ ಪ್ರೊ. ಹಂಪಣ್ಣ ವಹಿಸಲಿದ್ದು, ಸೀತಾ ಎಂ. ಹೆಗಡೆ, ಶಿವಕುಮಾರ್ ಆಳಗೋಡು, ಶರಣಪ್ಪತಳ್ಳಿ, ಅಣ್ಣಪ್ಪ ತೀರ್ಥಹಳ್ಳಿ, ಶಿವರಂಜಿನಿ ಎಂ.ಆರ್. ಶಿವಣ್ಣ, ಕೊಟ್ಟಕೇರಿಯನ ಲೀಲಾ ದಯಾನಂದ, ಡಾ.ವೈ.ಎಂ. ಯಾಕ್ಕೊಳ್ಳಿ (ಎಲ್ಲರೂ ಕನ್ನಡ), ವೀಣಾ ಉದಯನ (ಸಂಸ್ಕೃತ), ವೀಣಾ ಗುಪ್ತ ಮೇದನಿ (ಹಿಂದಿ), ಡಾ. ಅಶೋಕ ರಘುನಾಥ ಆಳಗೊಂದಿ (ಮರಾಠಿ) ವಾಸುದೇವ ಶಾನಭಾಗ(ಕೊಂಕಣಿ), ರೋಹಿಣಿ ಸತ್ಯ(ತೆಲುಗು) ವಿಮಲ್ ಕುಮಾರು(ತಮಿಳ್), ಇಂದಿರಾ ಬಾಲನ್ (ಮಲಯಾಳಂ), ವಿಜಯ ಶೆಟ್ಟಿ ಸಾಲೆತ್ತೂರು (ತುಳು), ಬಾಜಿರಣಿಯಂಡ ಅಪ್ಪಣ್ಣ(ಕೊಡವ) ಜೋತ್ಸಾ ಕಡಂದೇಲು(ಕರಾಡ) ಕವಿಗಳು ಭಾಗವಹಿಸಲಿದ್ದಾರೆ.
ಸಂಜೆ 4ಗಂಟೆಗೆ ‘ಹಿಂದಿ ಸಾಹಿತ್ಯದಲ್ಲಿ ಭಾರತೀಯತೆ’ ವಿಷಯದಲ್ಲಿ ಮೈಸೂರು ವಿವಿ ವಿಶ್ರಾಂತ ಹಿಂದಿ ಪ್ರಾಧ್ಯಾಪಕ ಡಾ.ತಿಪ್ಪೇಸ್ವಾಮಿ ಉಪನ್ಯಾಸ ನೀಡುತ್ತಾರೆ. ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರಸಾರಾಂಗ ವಿಭಾಗದ ಉಪನಿರ್ದೇಶಕ ಡಾ.ಚಂದ್ರಶೇಖರ ರೊಟ್ಟಿಗವಾಡ ಅಧ್ಯಕ್ಷತೆ ವಹಿಸಲಿದ್ದಾರೆ.
ದ.ಕ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಸಾಹಿತ್ಯಾಸಕ್ತರು ಭಾಗವಹಿಸಲು ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ರಾಜ್ಯ ಕಾರ್ಯದರ್ಶಿ ಡಾ. ಮಾಧವ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಕೆ, ಜಿಲ್ಲಾ ಉಪಾಧ್ಯಕ್ಷರಾದ ಬೈಕಾಡಿ ಜನಾರ್ದನ ಆಚಾರ್, ಮಂಗಳೂರು ಪ್ರಧಾನ ಕಾರ್ಯದರ್ಶಿ ಶ್ಯಾಮ ಭಟ್, ಅಕ್ಷತಾ ಬಜಪೆ ಪ್ರಕಟನೆ ತಿಳಿಸಿದ್ದಾರೆ.