ಮಣಿಪಾಲ: ಅಖಿಲ ಭಾರತ ಅಂತರ ವಿವಿ ಮಹಿಳಾ ಟೆನಿಸ್ ಆರಂಭ
ಗುಜರಾತ್, ಉಸ್ಮಾನಿಯಾ ವಿವಿ ಕ್ವಾ. ಫೈನಲಿಗೆ

ಮಣಿಪಾಲ, ಡಿ. 26: ಮಣಿಪಾಲ ಮಾಹೆ ವಿವಿಯ ಆಶ್ರಯದಲ್ಲಿ ಅಖಿಲ ಭಾರತ ಅಂತರ ವಿವಿ ಮಹಿಳಾ ಟೆನಿಸ್ ಟೂರ್ನಿ ಮಣಿಪಾಲದ ಮರೆನಾ ಒಳಾಂಗಣ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಬುಧವಾರ ಪ್ರಾರಂಭಗೊಂಡಿದ್ದು, ಮೊದಲ ದಿನದ ಪಂದ್ಯಗಳಲ್ಲಿ ಜಯಗಳಿಸಿದ ಗುಜರಾತ್ ವಿವಿ ಹಾಗೂ ಹೈದರಾಬಾದ್‌ನ ಉಸ್ಮಾನಿಯಾ ವಿವಿ ಮಹಿಳಾ ತಂಡಗಳು ಕ್ವಾರ್ಟರ್ ಫೈನಲ್ ಹಂತ ಪ್ರವೇಶಿವೆ.
ಇಂದು ನಡೆದ ಪ್ರಿಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಗುಜರಾತ್ ವಿವಿ, ಆಂಧ್ರ ವಿವಿಯನ್ನು 2-0 ಅಂತರದಿಂದ ಸೋಲಿಸಿದರೆ, ಉಸ್ಮಾನಿಯಾ ವಿವಿ, ಇಂದೋರ್‌ನ ಡಿಎವಿವಿಯನ್ನು 2-0 ಅಂತರದಿಂದ ಮಣಿಸಿತು.
ಗುಜರಾತ್ ವಿವಿ ಪರವಾಗಿ ದೀಪ್‌ಶಿಖಾ ಹಾಗೂ ಉರ್ಮಿ ಪಾಂಡ್ಯಾ ಅವರು ತಮ್ಮ ಆಂಧ್ರ ವಿವಿ ಎದುರಾಳಿಗಳನ್ನು ನೇರ ಸೆಟ್‌ಗಳಿಂದ ಹಿಮ್ಮೆಟ್ಟಿಸಿದರು. ಉಸ್ಮಾನಿಯಾ ವಿವಿ ಪರವಾಗಿ ಶ್ರಾವ್ಯ ಹಾಗೂ ಸಾಯಿ ಅವರು ತಮ್ಮ ಇಂದೋರ್ ವಿವಿ ಎದುರಾಳಿಗಳನ್ನು ಮಣಿಸಿ ತಂಡಕ್ಕೆ ಜಯ ತಂದಿತ್ತರು.
ಇದಕ್ಕೆ ಮುನ್ನ ಮಹಿಳಾ ಟೆನಿಸ್ ಟೂರ್ನಿಯನ್ನು ಭಾರತದ ಮಾಜಿ ಕ್ರಿಕೆಟ್ ಆಲ್‌ರೌಂಡರ್ ರಾಬಿನ್ ಸಿಂಗ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಹಾಗೂ ಕ್ರೀಡಾ ಕಾರ್ಯದರ್ಶಿ ಡಾ.ವಿನೋದ್ ನಾಯಕ್ ಉಪಸ್ಥಿತರಿದ್ದರು.