ಡಿ. 31: ಮಲ್ಪೆಯಲ್ಲಿ ಬೀಚ್ ಗಾಳಿಪಟ ಉತ್ಸವ

ಮಣಿಪಾಲ, ಡಿ. 26: ಉಡುಪಿ ಜಿಲ್ಲಾಡಳಿತ ಹಾಗೂ ಮಲ್ಪೆ ಅಭಿವೃದ್ಧಿ ಸಮಿತಿಯ ಜಂಟಿ ಆಶ್ರಯದಲ್ಲಿ ಡಿ. 31ರಂದು ಮಲ್ಪೆ ಕಡಲ ಕಿನಾರೆಯಲ್ಲಿ ವೈವಿಧ್ಯ ಮಯ ಕಾರ್ಯಕ್ರಮಗಳೊಂದಿಗೆ ಬೀಚ್ ಗಾಳಿಪಟ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಮಣಿಪಾಲದ ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಗಾಳಿಪಟ ಉತ್ಸವದ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬೀಚ್ ಗಾಳಿಪಟ ಉತ್ಸವವನ್ನು ಬೆಳಗ್ಗೆ 10:30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಅವರು ಉದ್ಘಾಟಿಸುವರು ಎಂದರು. ಅನಂತರ ಸಂಜೆ 6ಗಂಟೆಯವರೆಗೂ ವಿವಿಧ ರೀತಿಯ ಆಕಷಕರ್ವಾಗ ಗಾಳಿಪಟ ಹಾರಾಟ ನಡೆಯಲಿದೆ.
ಇದರಲ್ಲಿ ದೇಶದ ಖ್ಯಾತನಾಮ 30 ಮಂದಿ ಗಾಳಿಪಟ ಹಾರಿಸುವವರು ಭಾಗವಹಿಸಲಿದ್ದಾರೆ. ಅಪರಾಹ್ನ 2 ರಿಂದ ಸಂಜೆ 4 ಗಂಟೆಯವರೆಗೆ ಇಲ್ಲಿ ಗಾಳಿಪಟ ತಯಾರಿಸುವ ಕುರಿತು ಪ್ರಾತ್ಯಕ್ಷಿಕೆ ಹಾಗೂ ವಿಚಾರಸಂಕಿರಣ ನಡೆಯಲಿದೆ. ಇದರಲ್ಲಿ ಭಾಗವಹಿಸಲು ಹೆಸರು ನೊಂದಾಯಿಸಿಕೊಳ್ಳುವ ಮೊದಲ 100 ಮಂದಿಗೆ ಉಚಿತ ಪ್ರವೇಶವಿದ್ದು, ನಂತರದ ಪ್ರತಿಯೊಬ್ಬರಿಗೂ ಪ್ರವೇಶಶುಲ್ಕ ವಿಧಿಸಲಾಗುವುದು ಎಂದರು.
ಸಂಜೆ 5:30ರಿಂದ ಮಧ್ಯರಾತ್ರಿ 12 ಗಂಟೆಯವೆರೆಗೆ ವೈವಿಧ್ಯಮಯ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ. 12 ಗಂಟೆಗೆ ಹೊಸ ವರ್ಷದ ಸಂದರ್ಭದಲ್ಲಿ ಅತ್ಯಾಕರ್ಷಕ ಸುಡುಮದ್ದು ಪ್ರದರ್ಶನವಿರುತ್ತದೆ ಎಂದರು.
ಗಾಳಿಪಟ ಉತ್ಸವದಲ್ಲಿ ಎರಡು ರೀತಿಯ ಗಾಳಿಪಟಗಳನ್ನು ಹಾರಿಸಲಾಗುತ್ತದೆ. ಒಂದು ಹಗಲಿನಲ್ಲಿ ಹಾರಿಸುವ ಗಾಳಿಪಟ ಹಾಗೂ ರಾತ್ರಿ ಹಾರಿಸುವ ಎಲ್‌ಇಡಿ ರಾತ್ರಿ ಹಾರಿಸುವ ಗಾಳಿಪಟ. ಗಾಳಿಪಟ ಉತ್ಸವದಲ್ಲಿ ನೂರಾರು ಆತ್ಯಾಕರ್ಷಕ ವಿನ್ಯಾಸ, ಬಣ್ಣ, ಆಕಾರ, ಗಾತ್ರದ ಗಾಳಿಪಟಗಳನ್ನು ನೋಡಬಹುದು ಎಂದು ಪ್ರಿಯಾಂಕ ತಿಳಿಸಿದರು.
ಸಂಜೆ 5:30ರ ಬಳಿಕದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಂಚವಾದ್ಯ, ಕೊರಗರ ಡೋಲು, ಹುಲಿವೇಷ ಬ್ಯಾಂಡ್, ನಾಸಿಕ್ ಬ್ಯಾಂಡ್, ಆಫ್ರಿಕನ್ ಫ್ಯುಷನ್ ಸಂಗೀತ ಹಾಗೂ ಇತರ ಸಂಗೀತ ಬ್ಯಾಂಡ್‌ಗಳಿವೆ. 11:55ರ ಬಳಿಕ ಸುಡುಮದ್ದು ಪ್ರದರ್ಶನ ಹಾಗೂ ಎಲ್‌ಇಡಿ ಬೆಲೂನುಗಳ ಪ್ರದರ್ಶನವಿುತ್ತದೆ ಎಂದು ಅವರು ನುಡಿದರು.