ಡಿ. 30ರಂದು ಪ್ರೊ.ಅರವಿಂದ ಹೆಬ್ಬಾರ್‌ಗೆ ಅಭಿನಂದನೆ

ಉಡುಪಿ, ಡಿ.26: ಸಸ್ಯಶಾಸ್ತ್ರ ಪ್ರಾಧ್ಯಾಪಕರಾಗಿದ್ದು, ಬಹುಮುಖ ಪ್ರತಿಭೆಯ ಸಾಧಕ, ‘ರಾಗಧನ’ ಎಂಬ ಸಂಗೀತ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಹಲವು ಸಂಗೀತ ಪ್ರತಿಭೆಗಳು ಅರಳಲು ಕಾರಣರಾಗಿರುವ ಪ್ರೊ.ಅರವಿಂದ ಹೆಬ್ಬಾರ್ ಅವರನ್ನು ಉಡುಪಿಯ ಕಲಾಸಕ್ತರು ಹಾಗೂ ಅವರ ಅಭಿಮಾನಿಗಳು ಸೇರಿ ಡಿ.30ರಂದು ಸನ್ಮಾನಿಸಲಿದ್ದಾರೆ ಎಂದು ಸನ್ಮಾನ ಸಮಿತಿಯ ಅಧ್ಯಕ್ಷ ಪ್ರೊ. ಎಂ.ಎಲ್.ಸಾಮಗ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರೊ.ಹೆಬ್ಬಾರ್ ಉಡುಪಿಯ ಎಂಜಿಎಂ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಪ್ರಾಧ್ಯಾಪಕರಾಗಿದ್ದು, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುಗಳಾಗಿದ್ದವರು. ಅಲ್ಲದೇ ಉಡುಪಿಯಲ್ಲಿ 30 ವರ್ಷಗಳ ಹಿಂದೆ ‘ರಾಗಧನ’ ಸಂಗೀತ ಸಂಸ್ಥೆಯನ್ನು ಆರಂಭಿಸಿ ಕರಾವಳಿ ಕರ್ನಾಟಕದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಧ್ಯಯನ, ಅಭ್ಯಾಸ, ಅಧ್ಯಾಪನಗಳ ಹೊಸಯುಗಕ್ಕೆ ನಾಂದಿ ಹಾಡಿದವರು ಎಂದರು.
ಪ್ರಾತ್ಯಕ್ಷಿಕೆ, ವಿಚಾರಸಂಕಿರಣ, ‘ರಾಗಧನಶ್ರೀ’ ಮಾಸಪತ್ರಿಕೆ, ಪ್ರಸಿದ್ಧ ಕಲಾವಿದರ ಸಂಗೀತ ಕಚೇರಿ ಇತ್ಯಾದಿಗಳ ಮೂಲಕ ವಿಮರ್ಶನ ಪ್ರಜ್ಞೆಯನ್ನು ಬೆಳೆಸುತ್ತಾ ಸಂಗೀತ ಕ್ಷೇತ್ರವನ್ನು ಬೆಳೆಸಿದವರು. ಇವರ ಶಿಷ್ಯರು ರಾಷ್ಟ್ರಮಟ್ಟದ ಖ್ಯಾತಿ ಗಳಿಸಿದ್ದಾರೆ. ಇದೀಗ ಇವರೆಲ್ಲಾ ಸೇರಿ ಡಿ.30ರ ರವಿವಾರ ಪ್ರೊ.ಹೆಬ್ಬಾರ್‌ರನ್ನು ಸನ್ಮಾನಿಸಲು ನಿರ್ಧರಿಸಿದ್ದಾರೆ ಎಂದರು.
ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಡಿ.30ರಂದು ಬೆಳಗ್ಗೆ 7ರಿಂದ ರಾತ್ರಿ 9 ಗಂಟೆಯವರೆಗೆ ‘ವಸಂತಾರವಿಂದ’ ವಿವಿಧ ಕಾರ್ಯಕ್ರಮ ಗಳ ಸಂಯೋಜನೆಯೊಂದಿಗೆ ಹೆಬ್ಬಾರರನ್ನು ಸಾರ್ವಜನಿಕವಾಗಿ ಅಭಿನಂದಿಸಲಿದ್ದಾರೆ. ಈ ಸಂದರ್ಭ ಪ್ರಸಿದ್ಧ ಕಲಾವಿಮರ್ಶಕರು, ಕಲಾಕಾರರು ಅವರ ಸಾಧನೆಗಳ ವಿವಿಧ ಮುಖಗಳನ್ನು ವಿಶ್ಲೇಷಿಸಲಿದ್ದಾರೆ ಎಂದರು.
ವಸಂತಾರವಿಂದ ಕಾರ್ಯಕ್ರಮವನ್ನು ಬೆಳಗ್ಗೆ 9:30ಕ್ಕೆ ಅಂಬಲಪಾಡಿ ದೇವಸ್ಥಾನದ ಡಾ.ಎನ್.ಬಿ.ವಿಜಯಬಲ್ಲಾಳ್ ಉದ್ಘಾಟಿಸಲಿದ್ದು, ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಬಳಿಕ ಕರ್ನಾಟಕ ಹಾಗೂ ಹಿಂದುಸ್ಥಾನಿ ಸಂಗೀತ ಕಚೇರಿ, ಸನ್ಮಾನ, ಸಂವಾದ ಕಾರ್ಯಕ್ರಮಗಳು ನಡೆಯಲಿವೆ.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಡಾ.ತಿರುಮಲೇಶ್ವರ ಭಟ್, ನಿತ್ಯಾನಂದ ರಾವ್, ಉಮಾಶಂಕರಿ, ಆರ್.ಎಲ್.ಭಟ್ ಹಾಗೂ ಸದಾಶಿವ ರಾವ್ ಉಪಸ್ಥಿತರಿದ್ದರು.