ಪತ್ರಿಕೋದ್ಯಮದ ಜ್ಞಾನ, ವರದಿಗಾರಿಕೆಯ ಕೌಶಲ್ಯ ವಿದ್ಯಾರ್ಥಿ ಸಮುದಾಯಕ್ಕೂ ಅಗತ್ಯವಿದೆ: ಪ್ರದೀಪ್ ಕುಮಾರ್ ಕಲ್ಕೂರ
ಪತ್ರಿಕಾ ವರದಿಗಾರಿಕೆ ಕಮ್ಮಟ

ಮಂಗಳೂರು, ಡಿ. 26: ಪತ್ರಿಕೋದ್ಯಮದ ಜ್ಞಾನ ಮತ್ತು ವರದಿಗಾರಿಕೆಯ ಕೌಶಲ್ಯ ವಿದ್ಯಾರ್ಥಿ ಸಮುದಾಯಕ್ಕೂ ಅಗತ್ಯವಿದೆ ಎಂದು ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದ್ದಾರೆ.
ದ.ಕ. ಜಿಲ್ಲಾ ಸಾಹಿತ್ಯ ಪರಿಷತ್, ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಸುರತ್ಕಲ್‌ನ ವಿದ್ಯಾದಾಯಿನಿ ಪ್ರೌಢಶಾಲೆ ಇವುಗಳ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪತ್ರಿಕಾ ವರದಿಗಾರಿಕೆ ಕಮ್ಮಟವನ್ನು ಅವರು ಉದ್ಘಾಟಿಸಿ ಮಾತನಾಡುತ್ತಿದ್ದರು.
ಯಾವೂದೇ ಕ್ಷೇತ್ರದಲ್ಲಿ ಮುಂದುವರಿಯಲು ಆ ಕ್ಷೇತ್ರದ ಬಗ್ಗೆ ಆಸಕ್ತಿ, ಸ್ವಪ್ರಯತ್ನ ಹಾಗೂ ಅಗತ್ಯವಾದ ಕೌಶಲ್ಯವನ್ನು ಮೈಗೂಡಿಸಿಕೊಳ್ಳಬೇಕಾದ ಅಗತ್ಯವಿದೆ. ಪತ್ರಿಕೆಯಲ್ಲಿ ಬರುವ ಆಕರ್ಷಕ ಶೀರ್ಷಿಕೆಗಳು, ಆಕರ್ಷಕ ಫೋಟೊಗಳು ಸಾಕಷ್ಟು ವಿವರಗಳನ್ನು ನೀಡುತ್ತದೆ. ಪತ್ರಿಕಾ ವರದಿಗಳು ಜ್ಞಾನವನ್ನು ವೃದ್ಧಿಸಲು ಸಹಕಾರಿಯಾಗಿದೆ. ಇದೊಂದು ಕಲೆ ವಿದ್ಯಾರ್ಥಿಗಳು ಪತ್ರಿಕೆಗಳಿಗೆ ಬರೆಯುವ ಹವ್ಯಾಸವನ್ನು ಬಾಲ್ಯದಲ್ಲಿಯೇ ಮೈಗೂಡಿಸಿಕೊಂಡರೆ ಅದು ಅವರ ಮುಂದಿನ ಬದುಕಿನಲ್ಲಿ ಓರ್ವ ಉತ್ತಮ ಪತ್ರಕರ್ತನನ್ನಾಗಿ, ಬರಹಗಾರನನ್ನಾಗಿಯೂ ಮಾಡಬಹುದು. ಪ್ರಸಾರ ಭಾರತಿಯ ಮಾಜಿ ಅಧ್ಯಕ್ಷ ಖ್ಯಾತ ಪತ್ರಕರ್ತ ಎಂ.ವಿ.ಕಾಮತ್ ಕರಾವಳಿಯ ಪರಿಸರದಲ್ಲೇ ಬೆಳೆದು ತಮ್ಮ ಆಸಕ್ತಿ, ಸ್ವ ಪ್ರಯತ್ನದಿಂದ ದೇಶದ ಮಾಧ್ಯಮ ಕ್ಷೇತ್ರದ ಉನ್ನತ ಹುದ್ದೆಯನ್ನು ಅಲಂಕರಿಸಿರುವುದು ಒಂದು ಉದಾಹರಣೆ. ಈ ಹಿನ್ನೆಲೆಯಲ್ಲಿ ಸಮಾಜದ ಶೈಕ್ಷಣಿಕ ಕ್ಷೇತ್ರದಲ್ಲಿ, ಮಾಧ್ಯಮ ಕ್ಷೇತ್ರದಲ್ಲಿ ಮುಂದುವರಿಯಲು ಪತ್ರಿಕಾ ವರದಿಗಾರಿಕೆಯಂತಹ ಕಮ್ಮಟಗಳು ಸಹಕಾರಿಯಾಗಿದೆ ಎಂದು ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಸುರತ್ಕಲ್ ಹಿಂದೂ ವಿದ್ಯಾದಾಯಿನಿ ಸಂಘದ ಕಾರ್ಯದರ್ಶಿ ಎಂ.ವೆಂಕಟ್ರಾವ್ ವಹಿಸಿ ವಿದ್ಯಾರ್ಥಿಗಳಿಗೆ ಸಾಹಿತ್ಯದ ಜೊತೆ ಪತ್ರಿಕೆ ಓದುವ ಅಭಿರುಚಿ ಮತ್ತು ಪತ್ರಿಕೋದ್ಯಮದ ಬಗ್ಗೆ ಆಸಕ್ತಿ ಅಗತ್ಯವೆಂದು ಶುಭ ಹಾರೈಸಿದರು.
ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷೆ ವಿಜಯಲಕ್ಷ್ಮೀ ಬಿ.ಶೆಟ್ಟಿ ಸ್ವಾಗತಿಸಿ, ಗೌರವ ಕೋಶಾಧಿಕಾರಿ ಕೃಷ್ಣ ಮೂರ್ತಿ ಪಿ.ಕಮ್ಮಟದ ಉದ್ದೇಶಗಳನ್ನು ವಿವರಿಸಿದರು. ಕನ್ನಡ ಸಾಹಿತ್ಯ ಪರಿಷತ್ ಸುರತ್ಕಲ್ ಹೋಬಳಿಯ ಅಧ್ಯಕ್ಷ ವಿನಯ ಆಚಾರ್, ವಿದ್ಯಾದಾಯಿನಿ ಪ್ರೌಢ ಶಾಲೆಯ ಸಂಚಾಲಕ ಸುಧಾಕರ ರಾವ್ ಪೇಜಾವರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಮುಖ್ಯೋಪಾಧ್ಯಾಯ ಬಾಲಚಂದ್ರ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಡಾ.ಎಸ್.ಪದ್ಮ ನಾಭ ಭಟ್ ವಂದಿಸಿದರು. ದಿವಾಸ್ಪತಿ ಕಾರ್ಯಕ್ರಮ ನಿರೂಪಿಸಿದರು. ಪತ್ರಿಕಾ ವರದಿಗಾರಿಕೆ ಕಮ್ಮಟದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಪತ್ರಕರ್ತ ಪುಷ್ಪರಾಜ್ ಬಿ.ಎನ್ ವಿದ್ಯಾರ್ಥಿಗಳಿಗೆ ವರದಿಗಾರಿಕೆಯ ಕಮ್ಮಟವನ್ನು ನಡೆಸಿಕೊಟ್ಟರು. ಶಿಕ್ಷಕ ಹಾಗೂ ರಕ್ಷಕರ ಸಂಘದ ಪ್ರತಿನಿಧಿ ಗಂಗಾಧರ ಪುಜಾರಿ ಕಮ್ಮಟದ ಸಮಾರೋಪ ಸಮಾರಂಭದ ಅತಿಥಿಯಾಗಿ ಭಾಗವಹಿಸಿದ್ದರು.