ಸಾಮಾಜಿಕ ಜಾಲತಾಣದಲ್ಲಿ ಅವಹೇಳನ: ದೂರು

ಬೆಳ್ತಂಗಡಿ, ಡಿ. 6: ಕ್ರಿಸ್ಮಸ್ ದಿನಾಚರಣೆಯ ಸಂದರ್ಭದಲ್ಲಿ ಏಸು ಕ್ರಿಸ್ತರನ್ನು, ಮಾತೆ ಮೇರಿ ಅವರನ್ನು ಹಾಗೂ ಕ್ರೈಸ್ತ ಸಮುದಾಯವನ್ನು ಅವಹೇಳನಕಾರಿ ಯಾಗಿ ಬಿಂಬಿಸಿ, ಅಶ್ಲೀಲವಾಗಿ ಮತ್ತು ವ್ಯಂಗ್ಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಕ್ರೈಸ್ತ ಸಮುದಾಯವನ್ನು ಅವಮಾನಿಸಿದ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬುಧವಾರ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ರವೀಂದ್ರ ಗೌಡ ಪಾಟೀಲ ಎಂಬಾತ ಈ ರೀತಿಯ ಕೃತ್ಯವನ್ನು ಎಸಗಿದ್ದು, ಇದರಿಂದ ಕ್ರೈಸ್ತ ಸಮುದಾಯಕ್ಕೆ ಹಾಗೂ ಸಾಮರಸ್ಯ ವನ್ನು ಬಯಸುವ ಸರ್ವ ಧರ್ಮೀಯರಿಗೂ ನೋವಾಗಿದೆ. ಸಮಾಜದ ಸಾಮರಸ್ಯವನ್ನು ಕದಡುವ ಈ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ನ್ಯಾಯ ಒದಗಿಸಿಕೊಡಬೇಕು ಎಂದು ಬಂಗಾಡಿ ಬೆದ್ರಬೆಟ್ಟಿನ ನಿವಾಸಿ, ಎಸ್‍ಡಿಪಿಐ ಜಿಲ್ಲಾ ಉಪಾಧ್ಯಕ್ಷ ಅಂತೋನಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಎಸ್‍ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸಾ ಫ್ರಾಂಕೋ, ಎಸ್.ಡಿ.ಪಿ.ಐ ಮುಖಂಡರುಗಳಾದ ನವಾಝ್ ಶರೀಫ್ ಕಟ್ಟೆ, ಹೈದರ್ ನೀರ್ಸಾಲ್, ಅಶ್ರಫ್ ಕಟ್ಟೆ, ಜೊಸ್.ಪಿ ಮತ್ತು ಇತರರು ಜತೆಗಿದ್ದರು. ಬೆಳ್ತಂಗಡಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.