ಬೆಂಗಳೂರು: ಹೊತ್ತಿ ಉರಿದ ಖಾಸಗಿ ಬಸ್

ಬೆಂಗಳೂರು, ಡಿ.26: ಖಾಲಿ ಜಾಗದಲ್ಲಿ ನಿಲ್ಲಿಸಲಾಗಿದ್ದ ಹಳೆಯ ಖಾಸಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡು ಭಾಗಶಃ ಸುಟ್ಟು ಹಾನಿಯಾಗಿರುವ ಘಟನೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಡಿಸೋಜಾ ನಗರದ ಖಾಲಿ ಜಾಗದಲ್ಲಿ ಸುಮಾರು ಒಂದು ವರ್ಷದಿಂದ ಖಾಸಗಿ ಬಸ್ ಅನ್ನು ನಿಲ್ಲಿಸಲಾಗಿತ್ತು. ಬುಧವಾರ ಬೆಳಗ್ಗೆ 9:30ರ ಸಮಯದಲ್ಲಿ ಈ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ ಎಂದು ತಿಳಿದುಬಂದಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ವಾಹನಗಳೊಂದಿಗೆ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದರಾದರೂ ಬಸ್ ಭಾಗಶಃ ಸುಟ್ಟು ಹಾನಿಗೀಡಾಗಿದೆ. ಬೆಂಕಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ. ಬಹುಶಃ ಈ ಸ್ಥಳದಲ್ಲಿದ್ದ ಕಸಕ್ಕೆ ಹಾಕಿದ್ದ ಬೆಂಕಿ ಈ ಬಸ್‌ಗೆ ತಾಗಿ ಹೊತ್ತಿಕೊಂಡಿರಬಹುದೇ ಎಂದು ಶಂಕಿಸಲಾಗಿದೆ. ಈ ಸಂಬಂಧ ಆರ್.ಆರ್.ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





